ಮಂಗಳೂರು, ಮೇ 01, 2026 (ಕರಾವಳಿ ಟೈಮ್ಸ್) : ಗುರುವಾಯನಕೆರೆಯಿಂದ ಉಪ್ಪಿನಂಗಡಿವರೆಗಿನ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸಲು 13 ಕೋಟಿ ರೂಪಾಯಿ ಅಂದಾಜುಪಟ್ಟಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಎಪ್ರಿಲ್ 30 ರಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ. ಗುರುವಾಯನಕೆರೆಯಿಂದ ಉಪ್ಪಿನಂಗಡಿವರೆಗಿನ ರಾಜ್ಯ ಹೆದ್ದಾರಿಯು ಗುಡ್ಡ, ಇಳಿಜಾರು ಮತ್ತು ತಿರುವ ಹೊಂದಿರುವ ರಸ್ತೆಯಾಗಿದೆ. ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಕ್ಕೆ ಹಾಗೂ ಧರ್ಮಸ್ಥಳ, ವೇಣೂರು, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಾಗಿದೆ.
ಈಗಾಗಲೇ ರಸ್ತೆಯ 9.50 ಕಿ.ಮೀ. ಉದ್ದ ಚತುಷ್ಪಥ ರಸ್ತೆಯಾಗಿದೆ. ಉಳಿಕೆ ಭಾಗದಲ್ಲಿ ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ 1.270 ಕಿ.ಮೀ. ಚತುಷ್ಪಥ ರಸ್ತೆ, ಆಯ್ದ ಭಾಗಗಳಲ್ಲಿ ತಡೆಗೋಡೆ, ಆರ್‍ಸಿಸಿ ಚರಂಡಿ ನಿರ್ಮಾಣ, ಭೂಸ್ವಾಧೀನ ವೆಚ್ಚಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಜ್ಯ ಸಚಿವ ಸಂಪುಟವು 13 ಕೋಟಿ ವೆಚ್ಚದಲ್ಲಿ ಈ ಹೆದ್ದಾರಿ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ.
ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಗುರುವಾಯನಕೆರೆಯಿಂದ ಉಪ್ಪಿನಂಗಡಿವರೆಗಿನ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವ ಧೀರ್ಘಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ನಮ್ಮದು ನುಡಿದಂತೆ ನಡೆಯುವ ಸರ್ಕಾರ ಹಾಗಾಗಿ ಇಂದು ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಕರಾವಳಿ ಭಾಗದ ಸಂಪರ್ಕಕ್ಕೆ ರಸ್ತೆ ಅಭಿವೃದ್ಧಿ : ಕಳೆದ ಮಳೆಗಾಲದಲ್ಲಿ ತೀವ್ರ ಹಾನಿಗೊಳಗಾಗಿದ್ದ ಪುತ್ತೂರು-ಬೆಳ್ತಂಗಡಿಗೆ ಸಂಪರ್ಕ ಕಲ್ಪಿಸುವ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆಯ (ಎನ್ ಎಚ್ 118) ಅಭಿವೃದ್ಧಿಗಾಗಿ 13 ಕೋಟಿ ರೂಪಾಯಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಕಳೆದ ವರ್ಷ ಆದ ಅತೀವವಾದ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಈ ರಸ್ತೆ ಆಗಬೇಕೆಂದು ಅರಿತು ಸಂಪುಟಕ್ಕೆ ಶಿಪಾರಸ್ಸು ಮಾಡಿದ್ದೆ. ಹಾಗಾಗಿ ನನ್ನ ಮನವಿಯನ್ನು ಆದ್ಯತೆಯಾಗಿ ಪರಿಗಣಿಸಿ ಈ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ನೀಡಲಾಗಿದೆ. ಇದರಿಂದ ಕರಾವಳಿ ಜನರ ಸುಗಮ ಸಂಚಾರಕ್ಕೆ ಇದ್ದ ಅಡೆತಡೆ ನಿವಾರಣೆಯಾಗಲಿದೆ.
ರಾಜ್ಯದಾದ್ಯಂತ ಉಚಿತ ಎಂ ಆರ್ ಐ ಸ್ಕ್ಯಾನಿಂಗ್ ಸೌಲಭ್ಯ : ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ 81 ಕೋಟಿ ರೂಪಾಯಿ ವೆಚ್ಛದಲ್ಲಿ 6 ಜಿಲ್ಲಾ ಆಸ್ಪತ್ರೆಗಳಿಗೆ (ದಾವಣಗೆರೆ, ಮೈಸೂರು, ಧಾರವಾಡ, ಬಾಗಲಕೋಟೆ, ಬೆಂಗಳೂರು ನಗರ ಮತ್ತು ರಾಮನಗರ) ಹೊಸ ಹೈ-ಟೆಕ್ ಎಂ ಆರ್ ಐ ಯಂತ್ರಗಳನ್ನು ನೀಡಲು ಅನುಮೋದನೆ ನೀಡಲಾಗಿದೆ.
ಈ ಮಹತ್ವದ ಯೋಜನೆಗಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ವಿಶೇಷವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದಿರುವ ಉಸ್ತುವಾರಿ ದಿನೇಶ್ ಗುಂಡೂರಾವ್ ಅವರು ಅಭಿವೃದ್ಧಿ, ಸಾಮರಸ್ಯ ಹಾಗೂ ಸಹಬಾಳ್ವೆಯೇ ನಮ್ಮ ಸರ್ಕಾರದ ಮೂಲಮಂತ್ರ ಎಂದಿದ್ದಾರೆ.











0 comments:
Post a Comment