ಬಂಟ್ವಾಳ, ಎಪ್ರಿಲ್ 01, 2026 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಕಾರಾಜೆ ಬಳಿಯ ಹಳ್ಳದಿಂದ ಮರಳು ಕಳವು ಮಾಡಿಕೊಂಡು ಪಿಕಪ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ಇರಾ ಗ್ರಾಮದ ಮಂಚಿಕಟ್ಟೆ ಬಳಿ ಮಾ 31 ರಂದು ನಡೆದಿದೆ.
ಮಾರ್ಚ್ 31 ರಂದು ರಾತ್ರಿ ವೇಳೆ ಇರಾ ಗ್ರಾಮದ ಕುಕ್ಕಾಜೆಯಿಂದ ಮಂಚಿಕಟ್ಟೆ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ರನ್ನ ಗೌಡ ನೇತೃತ್ವದ ಪೊಲೀಸರು ಮಂಚಿಕಟ್ಟೆ ಬಳಿ ತೆರಳಿದಾಗ ಮರಳು ತುಂಬಿಸಿಕೊಂಡು ಸಾಗುತ್ತಿದ್ದ ಕೆಎ19 ಎಎಫ್4228 ನೋಂದಣಿ ಸಂಖ್ಯೆಯ ಪಿಕಪ್ ವಾಹನ ಕಂಡುಬಂದಿದ್ದು, ಸದ್ರಿ ವಾಹನವನ್ನು ತಡೆದು ಅದರ ಚಾಲಕ ಸಜಿಪಮೂಡ ಗ್ರಾಮದ ನಿವಾಸಿ ಅಬ್ದುಲ್ ರಜಾಕ್ (30) ಎಂಬಾತನಲ್ಲಿ ವಿಚಾರಿಸಿದಾಗ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪರವಾಣಿಗೆ ಇಲ್ಲದೇ ಹಾಗೂ ಯಾವುದೇ ರಾಜಸ್ವ ಪಾವತಿಸದೇ ಸರಕಾರಕ್ಕೆ ನಷ್ಟ ಉಂಟಾಗುವಂತೆ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ಸಜಿಪಮೂಡ ಗ್ರಾಮದ ಕಾರಾಜೆ ಬಳಿ ಇರುವ ಹಳ್ಳದಿಂದ ಮರಳು ಕಳವು ಮಾಡಿ ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಮರಳು ತುಂಬಿದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment