ಮಂಗಳೂರು, ಮೇ 14, 2026 (ಕರಾವಳಿ ಟೈಮ್ಸ್) : ಮೃತ ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಇನ್ನೂ ಹಣ ಜಮೆಯಾಗುತ್ತಿದ್ದು, ಮೃತಪಟ್ಟ ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಹಣವನ್ನು ಮರಳಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕೆಂದು ದ.ಕ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಸೂಚಿಸಿದರು.
ದ.ಕ ಜಿಲ್ಲಾ ಪಂಚಾಯತಿನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಮರಣ ಹೊಂದಿದ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ 22 ಕೋಟಿ ರೂಪಾಯಿ ವರ್ಗಾವಣೆಯಾಗಿದೆ ಎಂಬ ಮಾಹಿತಿಯನ್ನು ರಾಜ್ಯ ಕಛೇರಿಯಿಂದ ತಿಳಿಸಿರುವ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. ಫಲಾನುಭವಿಗಳ ಖಾತೆಗೆ ಜಮೆಯಾಗಿರುವ ಸಹಾಯಧನ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡುವ ಬಗ್ಗೆ ಫಲಾನುಭವಿಗಳ ಮಾಹಿತಿಯನ್ನು ಪಡೆಯಲು ಕ್ರಮವಹಿಸಬೇಕು ಎಂದವರು ಹೇಳಿದರು.
ಇಲಾಖೆಯ ಮಾಹಿತಿಯಲ್ಲಿ ಜೀವಂತವಿರುವ ಗೃಹಲಕ್ಷ್ಮಿ ಫಲಾನುಭವಿಯು ಮರಣ ಹೊಂದಿರುವುದಾಗಿ ದಾಖಲಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಸಭೆಗೆ ವರದಿ ಸಲ್ಲಿಸುವಂತೆ ಅಧ್ಯಕ್ಷರು ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ 425759 ಒಟ್ಟು ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳ ಪೈಕಿ ಈವರೆಗೆ ಒಟ್ಟು 1548 ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ಒಟ್ಟು 3,82,178 ಫಲಾನುಭವಿಗಳು ನೊಂದಾಯಿಸಿಕೊಂಡಿರುತ್ತಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಮರಣ ಹೊಂದಿದ ಫಲಾನುಭವಿಯ ಹೆಸರು, ಖಾತೆ ಸಂಖ್ಯೆ ಹಾಗೂ ಬ್ಯಾಂಕಿನ ವಿವರಗಳು ಇದ್ದಲ್ಲಿ ಬ್ಯಾಂಕ್ ಮುಖಾಂತರ ಕ್ರಮಕೈಗೊಳ್ಳಬಹುದು. ಇಲ್ಲವಾದಲ್ಲಿ ಗ್ರಾಮದಲ್ಲಿ ಮರಣ ಹೊಂದಿದವರ ಮಾಹಿತಿ ಗ್ರಾಮ ಕರಣಿಕರ ಕಚೇರಿಯಲ್ಲಿ ಲಭ್ಯವಿರುತ್ತದೆ. ಅಂತಹ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪಡೆದಲ್ಲಿ ಮರಣ ಹೊಂದಿದ ಫಲಾನುಭವಿಯ ಖಾತೆಗೆ ಸಹಾಯಧನ ಬಿಡುಗಡೆ ಮಾಡುವುದನ್ನು ತಡೆಹಿಡಿಯಬಹುದು. ಮೃತ ಫಲಾನುಭವಿಯ ಮರಣ ಪ್ರಮಾಣ ಪತ್ರ ಬಂದ ತಕ್ಷಣ ಫಲಾನುಭವಿಗಳ ಪಟ್ಟಿಯಿಂದ ಹೆಸರನ್ನು ತೆಗೆಯಬೇಕು. ಅವರ ಹೆಸರು, ಬ್ಯಾಂಕ್ ವಿವರಗಳಿದ್ದಲ್ಲಿ ಬ್ಯಾಂಕ್ ಮುಖಾಂತರ ಖಾತೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಬೇಕು ಎಂದವರು ಸೂಚಿಸಿದರು.
ಅನ್ನಭಾಗ್ಯ ಯೋಜನೆಯಡಿ ಅರ್ಕುಳ ಪಡಿತರ ಅಂಗಡಿಯನ್ನು ತೆರೆಯುವ ಬಗ್ಗೆ ವಿಷಯವು ಪ್ರಸ್ತಾಪವಾಗಿ 7 ತಿಂಗಳಾಗಿದ್ದರೂ, ಇನ್ನೂ ಸಮಸ್ಯೆ ಬಗೆಹರಿದಿರುವುದಿಲ್ಲ. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರು ವಿಚಾರಿಸಿದಾಗ ಸರ್ಕಾರದ ಆದೇಶದ ಪ್ರಕಾರ ಜಿಲ್ಲಾಧಿಕಾರಿಗಳ ಸಮಿತಿಯಲ್ಲಿ ಅನುಮೋದನೆಯಾದ ನಂತರ ಪಡಿತರ ಅಂಗಡಿಯನ್ನು ತೆರೆಯಲಾಗುವುದೆಂದು ಇಲಾಖಾಧಿಕಾರಿಗಳು ತಿಳಿಸಿದಾಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಲ್ಲಿ ಸದರಿ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ವಿಷಯಗಳಿಗೆ ಹಲವು ತಿಂಗಳಿನಿಂದ ಸಮಸ್ಯೆ ಬಗೆಹರಿದಿರುವುದಿಲ್ಲ. ಜಿಲ್ಲಾಧಿಕಾರಿಗಳ ಸಮಿತಿಯಲ್ಲಿ ಅನುಮೋದನೆಯಾಗಬೇಕಾದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಇಂತಹ ಸಮಸ್ಯೆಯನ್ನು ಬಗೆಹರಿಸಲು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.
ಪಡಿತರ ಚೀಟಿ ಸೇವೆಗಳಿಗಾಗಿ ಬಯೋಮೆಟ್ರಿಕ್ ಅಥವಾ ಹೆಬ್ಬೆರಳು ಗುರುತನ್ನು ನೀಡಲು ಸಂಬಂಧಪಟ್ಟ ಕೇಂದ್ರಗಳಿಗೆ ಭೇಟಿ ನೀಡಿದಾಗ ಹೆಬ್ಬೆರಳು ಗುರುತು ಮ್ಯಾಚ್ ಆಗದಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಸ್ಯೆ ತುಂಬಾ ವಯಸ್ಸಾದ, ನಡೆಯಲು ಅಸಾಧ್ಯವಾದ ಪಡಿತರ ಚೀಟಿದಾರರಿಗೆ ತುಂಬಾ ತೊಂದರೆಯಾಗುತ್ತಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಇಂತಹ ಸಮಸ್ಯೆಗೆ ವಿನಾಯಿತಿ ನೀಡುವಂತೆ ಅಧ್ಯಕ್ಷರು ತಿಳಿಸಿದರು.
ನೆಲ್ಯಾಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಜಾಗವನ್ನು ಒತ್ತುವರಿ ಮಾಡಲಾಗಿದ್ದು, ಬಸ್ ನಿಲ್ದಾಣ ಆದ ನಂತರ 2 ಮನೆಗಳಿಗೆ 94ಸಿ ನೀಡಲಾಗಿದೆ. 3 ಮನೆಗಳಿಗೆ ರಸ್ತೆ ನಿರ್ಮಿಸಲು ಸದರಿ ಜಾಗವನ್ನು ಉಪಯೋಗಿಸಿಕೊಳ್ಳಲಾಗಿದೆ. ಸುಮಾರು 30 ಸೆಂಟ್ಸ್ ಜಾಗ ಕೆ.ಎಸ್.ಆರ್.ಟಿ.ಸಿ.ಗೆ ಅನುಮೋದನೆಯಾದ ನಂತರ ಒತ್ತುವರಿಯಾಗಿದೆ. ಜಾಗವನ್ನು ಒತ್ತುವರಿ ಮಾಡಿರುವವರಿಗೆ ಸೂಕ್ತ ಕ್ರಮವಾಗಬೇಕೆಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಸದಸ್ಯರು ತಿಳಿಸಿದಾಗ ಈ ಬಗ್ಗೆ ಪರಿಶೀಲನೆ ಮಾಡಲಾಗುವುದೆಂದು ಇಲಾಖಾಧಿಕಾರಿಗಳು ತಿಳಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮವಹಿಸುವಂತೆ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದರು.
ಯುವನಿಧಿ ಯೋಜನೆಯಡಿಯಲ್ಲಿ ಲಭ್ಯವಿರುವ ಉದ್ಯೋಗ ತರಬೇತಿಯ ಬಗ್ಗೆ ಮಾಹಿತಿ ನೀಡಬೇಕು. ತಾಲೂಕು ಮಟ್ಟದಲ್ಲಿ ಯುವಕರಿಗೆ ಕೌಶಲ ತರಬೇತಿಗಳನ್ನು ನೀಡಬೇಕು ಎಂದು ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಅಂದಾಜು ಮತ್ತು ಮೌಲ್ಯಮಾಪನ ಅಧಿಕಾರಿ ಸುಮಾ ಕೆ.ಎಸ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಜೋಕಿಂ ಡಿಸೋಜಾ, ನಾರಾಯಣ ನಾಯಕ್, ಸದಸ್ಯರಾದ ಅರುಣ್ ಕುಮಾರ್ ಶೆಟ್ಟಿ, ಆಲ್ವಿನ್ ಕ್ಲೆಮೆಂಟ್ ಕುಟಿನ್ಹ, ಜಯಂತಿ ಬಿ.ಎ, ಶಾಹುಲ್ ಹಮೀದ್, ಉಮಾನಾಥ್ ಶೆಟ್ಟಿ, ಪದ್ಮನಾಭ ಸಾಲ್ಯಾನ್, ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.











0 comments:
Post a Comment