ಮಂಗಳೂರು, ಜೂನ್ 17, 2026 (ಕರಾವಳಿ ಟೈಮ್ಸ್) : ಭಾರತ ಸರ್ಕಾರದ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು (ವಾರ್ತಾ ಮತ್ತು ಪ್ರಸಾರ ಸಚಿವಾಲಯ) ದೇಶದ ಎಲ್ಲಾ ನೋಂದಾಯಿತ ನಿಯತಕಾಲಿಕೆಗಳ (ಪೀರಿಯಾಡಿಲ್ಸ್) ಪ್ರಕಾಶಕರು 2024-25ರ ಆರ್ಥಿಕ ವರ್ಷದ ಆಡಿಟ್ ಮಾಡಲಾದ ವಾರ್ಷಿಕ ಹೇಳಿಕೆಯನ್ನು ಜೂನ್ 30 ರ ಒಳಗಾಗಿ ಸಲ್ಲಿಸುವಂತೆ, ತಪ್ಪಿದಲ್ಲಿ ಭಾರಿ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.
ಸರ್ಕಾರ ಹೊರಡಿಸಿರುವ ಸಲಹಾ ಸೂಚನೆ ಸಂಖ್ಯೆ 11 ರ ಪ್ರಕಾರ, ‘ಪ್ರೆಸ್ ಮತ್ತು ನಿಯತಕಾಲಿಕೆಗಳ ನೋಂದಣಿ (ಪಿ ಆರ್ ಬಿ) ಕಾಯ್ದೆ, 2023’ ರ ಸೆಕ್ಷನ್ 7 ರ ಅಡಿಯಲ್ಲಿ ಪ್ರತಿ ನೋಂದಾಯಿತ ನಿಯತಕಾಲಿಕೆಯು ನಿಗದಿತ ಅವಧಿಯೊಳಗೆ ತನ್ನ ವಾರ್ಷಿಕ ಹೇಳಿಕೆಯನ್ನು ‘ಪ್ರೆಸ್ ಸೇವಾ ಪೋರ್ಟಲ್ ಮೂಲಕ ಆನ್ ಲೈನಿನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ಕಾಯ್ದೆಯ ಸೆಕ್ಷನ್ 14 ರ ಪ್ರಕಾರ, ಹಣಕಾಸು ವರ್ಷ ಮುಗಿದ ಒಂದು ವರ್ಷದೊಳಗೆ ವರದಿ ಸಲ್ಲಿಸಲು ವಿಫಲರಾಗುವ ಪ್ರಕಾಶಕರು ದಂಡನೆಗೆ ಗುರಿಯಾಗಲಿದ್ದಾರೆ.
ಮೊದಲ ಬಾರಿಯ ಸುಸ್ತಿದಾರರಿಗೆ ನಿಗದಿತ ದಿನಾಂಕದೊಳಗೆ ವರದಿ ಸಲ್ಲಿಸದಿದ್ದರೆ ಕನಿಷ್ಠ 10 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ. ಮುಂದಿನ ಸರಣಿ ವೈಫಲ್ಯಗಳಿಗೆ ಪ್ರತಿ ನಂತರದ ವರ್ಷದ ಸುಸ್ತಿಗೆ ದಂಡದ ಮೊತ್ತವು ದುಪ್ಪಟ್ಟಾಗುತ್ತಾ ಹೋಗುತ್ತದೆ (ಉದಾಹರಣೆಗೆ ಎರಡನೇ ಬಾರಿಗೆ 20 ಸಾವಿರ ರೂಪಾಯಿ). ಈ ದಂಡದ ಮೊತ್ತವು ಗರಿಷ್ಠ 2 ಲಕ್ಷ ರೂಪಾಯಿವರೆಗೆ ತಲುಪಬಹುದು.
ಸರ್ಕಾರವು ಜೂನ್ 30 ರ ಗಡುವಿನ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸುವುದಿಲ್ಲ ಎಂದು ತಿಳಿಸುತ್ತಾ, ನಿಯಮ ಉಲ್ಲಂಘಿಸುವ ಪ್ರಕಾಶಕರಿಂದ ಕಡ್ಡಾಯವಾಗಿ ದಂಡ ವಸೂಲಿ ಮಾಡಲಾಗುವುದು ಎಂದು ಡೆಪ್ಯುಟಿ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರದ್ದಾದ ಪತ್ರಿಕೆಗಳ ಶೀರ್ಷಿಕೆಗಳ ಮರುಸ್ಥಾಪನೆ : ದಂಡ ಪಾವತಿಗೆ ಜೂನ್ 30 ಕೊನೆಯ ದಿನ
ವಾರ್ಷಿಕ ವರದಿಗಳನ್ನು ಸಲ್ಲಿಸದ ಕಾರಣಕ್ಕಾಗಿ ರದ್ದಾಗಿರುವ ಪತ್ರಿಕೆಗಳ ಶೀರ್ಷಿಕೆಗಳನ್ನು ಮರುಸ್ಥಾಪಿಸಲು ಭಾರತ ಸರ್ಕಾರದ ಪತ್ರಿಕೆಗಳ ಪ್ರೆಸ್ ರಿಜಿಸ್ಟ್ರಾರ್ ಜನರಲ್ ಕಚೇರಿಯು ಪ್ರಕಾಶಕರಿಗೆ ಕೊನೆಯ ಅವಕಾಶವನ್ನು ನಿಡಿದೆ.
ಪ್ರೆಸ್ ಮತ್ತು ರಿಜಿಸ್ಟ್ರೇಷನ್ ಆಫ್ ಪಿರಿಯಾಡಿಕಲ್ಸ್ ಕಾಯ್ದೆ, 2023ರ ನಿಯಮಗಳನ್ನು ಪಾಲಿಸದ ಕಾರಣಕ್ಕಾಗಿ ಹಲವು ಪತ್ರಿಕೆಗಳ ಶೀರ್ಷಿಕೆಗಳನ್ನು ರದ್ದುಗೊಳಿಸಲಾಗಿತ್ತು. ಈ ಕುರಿತು ಪ್ರಕಾಶಕರು ಮತ್ತು ಪಾಲುದಾರರಿಂದ ಬಂದ ಮನವಿಗಳನ್ನು ಪುರಸ್ಕರಿಸಿ, ಇಲಾಖೆಯು ಈ ಅಂತಿಮ ಅವಕಾಶವನ್ನು ಕಲ್ಪಿಸಿದೆ. ಬಾಕಿ ಇರುವ ದಂಡವನ್ನು ಪಾವತಿಸಲು ಮತ್ತು ವಾರ್ಷಿಕ ವರದಿಯನ್ನು ಸಲ್ಲಿಸಲು ಜೂನ್ 30 ಕೊನೆಯ ದಿನ.
ರದ್ದಾದ ಪಟ್ಟಿಯಿಂದ ಶೀರ್ಷಿಕೆಯನ್ನು ತೆಗೆದುಹಾಕಲು, ಪ್ರಕಾಶಕರು ಬಾಕಿ ಇರುವ ದಂಡವನ್ನು ಪಾವತಿಸಬೇಕು ಮತ್ತು 2024-25ರ ಆರ್ಥಿಕ ವರ್ಷದ ವಾರ್ಷಿಕ ವರದಿಯನ್ನು ಪ್ರೆಸ್ ಸೇವಾ ಪೋರ್ಟಲ್ ಮೂಲಕ ಕಡ್ಡಾಯವಾಗಿ ಸಲ್ಲಿಸಬೇಕು.
ಜೂನ್ 30 ರ ನಂತರ ಯಾವುದೇ ಕಾರಣಕ್ಕೂ ಕಾಲಾವಕಾಶವನ್ನು ವಿಸ್ತರಿಸಲಾಗುವುದಿಲ್ಲ. ಈ ಗಡುವಿನೊಳಗೆ ದಂಡ ಪಾವತಿಸದಿದ್ದರೆ ಶೀರ್ಷಿಕೆಗಳನ್ನು ಶಾಶ್ವತವಾಗಿ ರದ್ದುಗೊಳಿಸಲಾಗುವುದು ಮತ್ತು ಈ ಬಗ್ಗೆ ಯಾವುದೇ ಮೇಲ್ಮನವಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಉಪ ಪ್ರೆಸ್ ರಿಜಿಸ್ಟ್ರಾರ್ ಜನರಲ್ ರತ್ನಾಕರ್ ಪಾಮುಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













0 comments:
Post a Comment