ಬಂಟ್ವಾಳ, ಜುಲೈ 10, 2026 (ಕರಾವಳಿ ಟೈಮ್ಸ್) : ಸರ್ಕಾರಕ್ಕೆ ಮುಟ್ಟುಗೋಲು ಹಾಕಲಾಗಿರುವ 579.65 ಕೆಜಿ ಬೆಳ್ತಿಗೆ ಪಡಿತರ ಅಕ್ಕಿ ಮತ್ತು 99.73 ಕೆಜಿ ಪಡಿತರ ಕುಚ್ಚಲಕ್ಕಿಯನ್ನು ಬಹಿರಂಗ ಹರಾಜು (ಏಲಂ) ಮೂಲಕ ವಿಲೇವಾರಿ ಮಾಡಲಾಗುವುದು. ಆಸಕ್ತಿಯುಳ್ಳವರು ಜುಲೈ 13 ರಂದು ಬೆಳಿಗ್ಗೆ 11 ಗಂಟೆಗೆ ವಿಟ್ಲದ, ನ್ಯಾಯಬೆಲೆ ಅಂಗಡಿ ಸಂಖ್ಯೆ-103, ಲ್ಯಾಂಪ್ ಸಹಕಾರ ಸಂಘ ನಿ ಬಂಟ್ವಾಳ ಶಾಖೆಯಲ್ಲಿ 1,500/- ರೂಪಾಯಿ ಮುಂಗಡ ಠೇವಣಿಯನ್ನು ಸರ್ಕಾರಕ್ಕೆ ಸಂದಾಯ ಮಾಡಿ ಬಹಿರಂಗ ಹರಾಜಿನಲ್ಲಿ ಭಾಗವಹಿಸಬಹುದು.
ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವನಿ£ಕರು ಮುಂಗಡ ಠೇವಣಿಯನ್ನು ಹರಾಜಿನ ದಿನಾಂಕದಂದು ಸ್ಥಳದಲ್ಲಿ ನಗದಾಗಿ ಪಾವತಿ ಮಾಡಿ ರಸೀದಿಯನ್ನು ಪಡೆದುಕೊಳ್ಳಬೇಕು. ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಇರುವವರು ತಮ್ಮ ಆಧಾರ್ ಕಾರ್ಡ್ ನಕಲು ಪ್ರತಿಯನ್ನು ನೀಡಿ ಹರಾಜು ಆರಂಭಿಸುವ ಮುನ್ನ ನಿಗದಿತ ಮುಂಗಡ ಠೇವಣಿಯನ್ನು ಪಾವತಿಸಬೇಕು.
ಹರಾಜು ಮಾಡಲ್ಪಡುವ ಪಡಿತರ ಅಕ್ಕಿಯು ಯಾವ ಸ್ಥಿತಿಯಲ್ಲಿ ಹೇಗಿದೆಯೋ ಅದೇ ಸ್ಥಿತಿಯಲ್ಲಿ ಏಲಂ ಹಾಗೂ ವಿಲೇವಾರಿ ಮಾಡಲಾಗುತ್ತದೆ. ಮುಂಗಡ ಪಾವತಿ ಮಾಡಿದ ಆಸಕ್ತಿದಾರರಲ್ಲದೆ ಬೇರೆಯವರು ಹರಾಜಿನಲ್ಲಿ ಭಾಗವಹಿಸುವಂತಿಲ್ಲ. ಯಶಸ್ವಿ ಏಲಂದಾರರು ಏಲಂ ಖಾಯಂಗೊಂಡ 3 ಕಛೇರಿ ದಿವಸಗೊಳಗೆ ಮುಂಗಡ ಪಾವತಿಯನ್ನು ಕಳೆದು ಸಂಪೂರ್ಣ ಮೊತ್ತವನ್ನು ಪಾವತಿಮಾಡಬೇಕು ಹಾಗೂ ಸಂಬಂಧಪಟ್ಟ ತೆರಿಗೆಯನ್ನು ಅವರೇ ಪಾವತಿಸಬೇಕು.
ಯಶಸ್ವಿ ಏಲಂದಾರರು ಹರಾಜು ಮೊತ್ತವನ್ನು ಸಂಪೂರ್ಣವಾಗಿ ಪಾವತಿಸಿದ ತಕ್ಷಣ ತಮ್ಮ ಸ್ವಂತ ಖರ್ಚಿಯಲ್ಲಿ ಪಡಿತರ ಅಕ್ಕಿಯನ್ನು ಸ್ಥಳದಿಂದ ಸಾಗಿಸಬೇಕು. ಹರಾಜು (ಏಲಂ) ಪ್ರಕ್ರಿಯೆಯಲ್ಲಿ ಹರಾಜು ನಿರ್ವಹಣಾಧಿಕಾರಿಯಾಗಿ ಬಂಟ್ವಾಳ ತಾಲೂಕು ಕಚೇರಿಯ ಆಹಾರ ಶಿರಸ್ತೇದಾರರನ್ನು ನೇಮಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















0 comments:
Post a Comment