ಮಂಗಳೂರು, ಆಗಸ್ಟ್ 16, 2026 (ಕರಾವಳಿ ಟೈಮ್ಸ್) : ಕರಾವಳಿ ಜಿಲ್ಲೆಯ ವಿದ್ಯಾರ್ಥಿ ಸಮೂಹದ ಮನವಿಗೆ ರಾಜ್ಯದ ಡಿಕೆಶಿ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತ ಮುದ್ರೆಯೊತ್ತಿದೆ. ಕರಾವಳಿಯ ಶ್ರದ್ದಾ ಭಕ್ತಿಯ ನಾಗರ ಪಂಚಮಿ ಆಚರಣೆಗೆ ಸರಕಾರ ಕರಾವಳಿ ಜಿಲ್ಲೆಗಳಲ್ಲಿ ಸಾರ್ವತ್ರಿಕ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳ ಮೂಲಕ ಆದೇಶಿಸಿದೆ.
ಮಂಗಳೂರಿನ ಕಾನೂನು ವಿದ್ಯಾರ್ಥಿಗಳಾದ ಯು ಟಿ ಫರೀದ್, ಕುಡುಪು ಗಗನ್ ಭಾಸ್ಕರ್, ಸಾತ್ವಿಕ್ ಕುಮಾರ್ ಜೈನ್, ಪ್ರಣವ್ ಜಿ ಎಸ್, ನೆಲ್ಲಿತ್ತಾಯ, ಕೆವಿನ್ ಲೋಬೋ ಹಾಗೂ ಪವನ್ ಉಮೇಶ್ ಶೆಟ್ಟಿ ಅವರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಡಾ ಯು ಟಿ ಖಾದರ್ ಫರೀದ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಕ್ತಿಯಿಂದ ಆಚರಿಸುವ ಪವಿತ್ರ ನಾಗರ ಪಂಚಮಿ ಹಬ್ಬದ ಪ್ರಯುಕ್ತ ರಜೆ ಘೋಷಿಸುವಂತೆ ಮನವಿ ಮಾಡಿದ್ದರು.
ವಿದ್ಯಾರ್ಥಿಗಳ ಮನವಿಯನ್ನು ಸಚಿವ ಖಾದರ್ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಗಮನಕ್ಕೆ ತಂದಿದ್ದರು. ಇದೀಗ ವಿದ್ಯಾರ್ಥಿ ಸಮೂಹದ ಮನವಿಗೆ ಅಸ್ತು ಎಂದಿರುವ ಸಿಎಂ ಅವರು ಈ ಬಗ್ಗೆ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ರಜೆ ಘೋಷಿಸುವ ಅಧಿಕಾರ ನೀಡಿ ಆದೇಶ ನೀಡಿರುವ ಹಿನ್ನಲೆಯಲ್ಲಿ ಭಾನುವಾರ ದ ಕ ಹಾಗೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಾಗರ ಪಂಚಮಿ ಆಚರಿಸುವ ಆಗಸ್ಟ್ 17 ರಂದು ಸೋಮವಾರ ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಮನವಿಯನ್ನು ಪರಿಗಣಿಸಿ ನಾಗರ ಪಂಚಮಿ ಹಬ್ಬದ ಪ್ರಯುಕ್ತ ಅಧಿಕೃತವಾಗಿ ರಜೆ ಘೋಷಿಸಿ, ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ ಯು ಟಿ ಖಾದರ್ ಫರೀದ್ ಅವರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಡಿಕೆಶಿ ಸರಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಮಹತ್ವದ ಕ್ರಮ ಕೈಗೊಳ್ಳುವ ಮೂಲಕ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರಕಾರ ಯುವ ಸಮೂಹಕ್ಕೆ ಪ್ರಾಧಾನ್ಯತೆ ನೀಡುವ ಬಗ್ಗೆ ಸೂಚನೆ ನೀಡಿದ್ದರು. ಬಳಿಕ ಭಾರತ್ ಜೋಡೋ ಯುವಕ ಸಂಘ ಸ್ಥಾಪಿಸುವ ನಿಟ್ಟಿನಲ್ಲೂ ಅನುದಾನ ಬಿಡುಗೆಗೊಳಿಸಿ ಅಧಿಕೃತ ಆದೇಶ ಹೊರಡಿಸಿರುವುದರ ಬಗ್ಗೆಯೂ ವಿದ್ಯಾರ್ಥಿ ಸಮೂಹ ಕೊಂಡಾಡಿದೆ. ಮುಂದಿನ ದಿನಗಳಲ್ಲೂ ಕೂಡಾ ಈ ಸರಕಾರ ವಿದ್ಯಾರ್ಥಿಗಳ ಪರ ಹಾಗೂ ಯುವ ಸಮೂಹದ ಪರವಾಗಿ ಇನ್ನಷ್ಟು ಕಾರ್ಯಕ್ರಮಗಳನ್ನು ನೀಡುವಂತೆ ವಿದ್ಯಾರ್ಥಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.
























0 comments:
Post a Comment