ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನಲೆಯಲ್ಲಿ ದೇಶದಲ್ಲಿ ವಿಧಿಸಲಾಗಿರುವ 21 ದಿನಗಳ ಲಾಕ್‍ಡೌನನ್ನು ಎಪ್ರಿಲ್ 14ರ ನಂತರ ಏಕಕಾಲಕ್ಕೆ ತೆರವುಗೊಳಿಸುವ ಚಿಂತನೆ ಮಾಡಲಾಗುವುದಿಲ್ಲ ಎಂಬ ಇಂಗಿತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ ನಂತರ ಇಂದು ಮೊದಲ ಬಾರಿಗೆ ಸರ್ವಪಕ್ಷಗಳ ಸಂಸದರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರಧಾನಿ, ಲಾಕ್‍ಡೌನ್ ಮಾಡಿದ್ದರೂ ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್‍ಡೌನ್ ಎಪ್ರಿಲ್ 14ರ ನಂತರವೂ ಮುಂದುವರೆಸುವ ಅಗತ್ಯವಿದೆ ಎಂದಿದ್ದಾರೆ.
ಎಪ್ರಿಲ್ 14 ರನಂತರ ಲಾಕ್‍ಡೌನ್ ವಿಸ್ತರಣೆ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೋದಿ, ಏಕಕಾಲಕ್ಕೆ ಲಾಕ್‍ಡೌನ್ ತೆರವುಗೊಳಿಸುವುದಿಲ್ಲ. ಈ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಕಠಿಣ ನಿರ್ಧಾರವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಸಂಸದರಿಗೆ ತಿಳಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ಪಿಟಿಐಗೆ ಪ್ರತಿಕ್ರಿಯಿಸಿದ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಲಾಕ್‍ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಎಪ್ರಿಲ್ 14ರ ನಂತರ ಲಾಕ್ ಡೌನ್ ಒಂದೇ ಬಾರಿಗೆ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದಾಗಿ ಸಭೆಯ ಬಳಿಕ ಬಿಜು ಜನತಾ ದಳದ ಸಂಸದ ಪಿನಾಕಿ ಮಿಶ್ರಾ ಹೇಳಿದ್ದಾರೆ.
0 comments:
Post a Comment