ಬೆಂಗಳೂರು, ಎಪ್ರಿಲ್ 19, 2021 (ಕರಾವಳಿ ಟೈಮ್ಸ್) : ಕನ್ನಡದ ನಿಘಂಟು ತಜ್ಞ, ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ. ಜಿ. ವೆಂಕಟಸುಬ್ಬಯ್ಯ (108) ಅವರು ಭಾನುವಾರ ತಡ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ವಾರದ ಹಿಂದೆ ಮೂತ್ರನಾಳದ ಸೋಂಕಿಗೆ ಒಳಗಾಗಿದ್ದ ಅವರನ್ನು ಶಾಂತಿ ಸರ್ಜಿಕಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಗುಣಮುಖರಾಗಿದ್ದ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವವರಿದ್ದರು. ಆದರೆ ಭಾನುವಾರ ತಡ ರಾತ್ರಿ ವಯೋಸಹಜವಾಗಿ ಅಸ್ವಸ್ಥರಾದ ಅವರು ನಿಧನರಾಗಿದ್ದಾರೆ ಅವರ ಕುಟುಂಬ ಮೂಲಗಳು ತಿಳಿಸಿವೆ.
ಪ್ರೊ. ಜಿ. ವೆಂಕಟಸುಬ್ಬಯ್ಯ 1913ರ ಆಗಸ್ಟ್ 13ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದ್ದರು. ಭಾಷಾ ತಜ್ಞ, ಸಂಶೋಧಕ, ಬರಹಗಾರ, ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ‘ಕನ್ನಡ ನಿಘಂಟು ಶಾಸ್ತ್ರ ಪರಿಚಯ’ ಇವರ ಶ್ರೇಷ್ಠ ಗ್ರಂಥವಾಗಿದೆ.
ಈ ಹಿಂದೆ ವೆಂಕಟ ಸುಬ್ಬಯ್ಯನವರು ಬೆಂಗಳೂರಿನಲ್ಲಿ 2011ರ ಫೆಬ್ರವರಿ 4 ರಿಂದ 6 ರವರೆಗೆ ನಡೆದ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಕೆ.ಜಿ. ನಾಗರಾಜಪ್ಪ ಅವರ ಚಿಂತನಶೀಲ ಬರಹ ಮಾಲಿಕೆ ‘ಅನುಶ್ರೇಣಿ-ಯಜಮಾನಿಕೆ’ ವಿಮರ್ಶಾ ಕೃತಿ ಆಯ್ಕೆಯಾಗಿತ್ತು. ವೆಂಕಟಸುಬ್ಬಯ್ಯ ಅವರು ಕನ್ನಡದ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ.
ಇದಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ದಕ್ಷಿಣ ಭಾರತ ವಿಭಾಗಕ್ಕೆ ನೀಡಲಾಗುವ 2016-17ನೇ ಸಾಲಿನ ಭಾಷಾ ಸಮ್ಮಾನ್ ಪ್ರಶಸ್ತಿ ಪಡೆದಿದ್ದರು.
0 comments:
Post a Comment