ತ್ರಿಪುರದಲ್ಲಿ ಸಿಪಿಐಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ - Karavali Times ತ್ರಿಪುರದಲ್ಲಿ ಸಿಪಿಐಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ - Karavali Times

728x90

11 September 2021

ತ್ರಿಪುರದಲ್ಲಿ ಸಿಪಿಐಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ

ಮಂಗಳೂರು, ಸೆಪ್ಟಂಬರ್ 11, 2021 (ಕರಾವಳಿ ಟೈಮ್ಸ್) : ತ್ರಿಪುರ ರಾಜ್ಯದೆಲ್ಲೆಡೆ ಸಿಪಿಐಎಂ ಕಚೇರಿಗಳ ಮೇಲೆ ನಡೆದ ಸರಣಿ ದಾಳಿಯನ್ನು ಖಂಡಿಸಿ, ಬಿಜೆಪಿಯ ತಾಲಿಬಾನ್ ಮಾದರಿಯ ಗೂಂಡಾಗಿರಿ, ಪೈಶಾಚಿಕ ಕೃತ್ಯಗಳನ್ನು ವಿರೋಧಿಸಿ, ಸಿಪಿಐಎಂ ನೇತೃತ್ವದಲ್ಲಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಿತು. 

ನೂರಾರು ಸಂಖ್ಯೆಯಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ಬಿಜೆಪಿಯ ಗೂಂಡಾಗಿರಿ ಹಾಗೂ ಭಯೋತ್ಪಾದನಾ ಕೃತ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐಎಂ ದ ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ ಬಾಲಕೃಷ್ಣ ಶೆಟ್ಟಿ, ತ್ರಿಪುರ ರಾಜ್ಯದಲ್ಲಿ 40 ವರ್ಷಗಳ ಕಾಲ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಕಮ್ಯುನಿಸ್ಟರು ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸಿದ್ದರು. ಮಾತ್ರವಲ್ಲದೆ ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟ ಅಲ್ಲಿನ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ದ ಪ್ರಬಲವಾಗಿ ಸೆಣಸಾಟ ನಡೆಸಿ ರಾಜ್ಯದಲ್ಲಿ ಐಕ್ಯತೆ ಸಾಧಿಸಿ, ತ್ರಿಪುರವನ್ನು ಭಾರತದ ಅವಿಬಾಜ್ಯ ಅಂಗವಾಗಿಸುವಲ್ಲಿ ಅಲ್ಲಿನ ಕಮ್ಯುನಿಸ್ಟ್ ಚಳುವಳಿಯ ಪಾತ್ರ ಪ್ರಧಾನವಾಗಿದೆ. 

ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣಬಲ, ತೋಲ್ಬಲ ಬಳಸಿ, ಕುತಂತ್ರದಿಂದ ಆಧಿಕಾರಕ್ಕೇರಿದ ಬಿಜೆಪಿ, ತನ್ನ ಜನವಿರೋಧಿ ನೀತಿಗಳಿಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಿದೆ. ಮಾತ್ರವಲ್ಲದೆ ತನ್ನ ಭಯೋತ್ಪಾದನಾ ಕೃತ್ಯದಿಂದ ಜನತೆಯಲ್ಲಿ ಭಯಭೀತಿಯನ್ನು ಸೃಷ್ಟಿಸಿದೆ. ಇದರ ವಿರುದ್ದ ಪ್ರಬಲ ಜನಚಳುವಳಿಯನ್ನು ಸಂಘಟಿಸಿದ ಕಮ್ಯುನಿಸ್ಟರ ವಿರುದ್ದ ಸರಣಿ ದಾಳಿ ಸಂಘಟಿಸುವ ಮೂಲಕ ತನ್ನ ಹತಾಶ ಪ್ರವೃತ್ತಿಯನ್ನು ಪ್ರದರ್ಶಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ದೇಶಪ್ರೇಮದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ತ್ರಿಪುರದಲ್ಲಿ ದೇಶದ್ರೋಹಿಗಳೊಂದಿಗೆ ಒಪ್ಪಂದ ಮಾಡಿ ಕಳೆದ ಚುನಾವಣೆಯಲ್ಲಿ ಗೆದ್ದು ರಾಜ್ಯದೆಲ್ಲೆಡೆ ದೊಂಬಿ ಗಲಭೆ ಸೃಷ್ಟಿಸಿ ಜನರ ಬದುಕನ್ನೇ ನರಕಯಾತನೆಯನ್ನಾಗಿಸಿದೆ. ತನ್ನ ತಾಲಿಬಾನ್ ಮಾದರಿಯ ಭಯೋತ್ಪಾದನಾ ಕೃತ್ಯದ ಮೂಲಕ ಕಮ್ಯುನಿಸ್ಟರ ಮೇಲೆ ದೈಹಿಕ ದಾಳಿ ನಡೆಸುವ ಬಿಜೆಪಿ ಸಂಘ ಪರಿವಾರದ ವಿರುದ್ದ ಭುಗಿಲೆದ್ದ ಆಕ್ರೋಶ ಜನಚಳುವಳಿಯಾಗಿ ಮಾರ್ಪಟ್ಟು ತ್ರಿಪುರ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆ ಎಂದರು. 

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ ಯಾದವ ಶೆಟ್ಟಿ ಮಾತನಾಡಿ, ಅಂದು ಕಾಂಗ್ರೆಸ್ ನಡೆಸಿದ ಅರೆ ಫ್ಯಾಸಿಸ್ಟ್ ದಬ್ಬಾಳಿಕೆಯನ್ನು ಎದುರಿಸಿಯೇ ತ್ರಿಪುರ ರಾಜ್ಯದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೇರಿದ್ದು ಮಾತ್ರವಲ್ಲ 40 ವರ್ಷಗಳ ಕಾಲ ಸುಧೀರ್ಘವಾಗಿ ಉತ್ತಮ ಆಡಳಿತ ನೀಡುವ ಮೂಲಕ ದೇಶದಲ್ಲೇ ಮಾದರಿ ಸರಕಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಬಿಜೆಪಿ ಸಂಘಪರಿವಾರ ನಡೆಸುವ ಭಯೋತ್ಪಾದನಾ ಕೃತ್ಯದಿಂದ ಕಮ್ಯುನಿಸ್ಟರು ಯಾವತ್ತೂ ವಿಚಲಿತರಾಗುವುದಿಲ್ಲ. ಕಮ್ಯುನಿಸ್ಟರು ತನ್ನ ಕೊನೆಯ ಉಸಿರು ಇರುವವರೆಗೂ ದೇಶದ ಐಕ್ಯತೆ, ಸೌಹಾರ್ದತೆಗಾಗಿ ಹಾಗೂ ಜನರ ಬದುಕಿನ ರಕ್ಷಣೆಗಾಗಿ ಶ್ರಮಿಸುತ್ತಾರೆ ಎಂದರು. 

ಸಿಪಿಐಎಂ ಜಿಲ್ಲಾ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಸಿಪಿಐಎಂ ಮಂಗಳೂರು ನಗರ ಮುಖಂಡರಾದ ನವೀನ್ ಕೊಂಚಾಡಿ, ಬಶೀರ್ ಪಂಜಿಮೊಗರು, ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ದಿನೇಶ್ ಶೆಟ್ಟಿ, ಶಶಿಧರ್ ಶಕ್ತಿನಗರ, ಶ್ರೀನಾಥ ಕಾಟಿಪಳ್ಳ ಮಹಿಳಾ ಮುಖಂಡರಾದ ಭಾರತಿ ಬೋಳಾರ, ನಳಿನಾಕ್ಷಿ, ವಿಲಾಸಿನಿ, ಪ್ರಮೀಳಾ ಶಕ್ತಿನಗರ, ದಲಿತ ಹಕ್ಕುಗಳ ಸಮಿತಿಯ ನಾಯಕ ತಿಮ್ಮಯ್ಯ ಕೊಂಚಾಡಿ, ಪ್ರಗತಿಪರ ಚಿಂತಕ ಡಾ ಕೃಷ್ಣಪ್ಪ ಕೊಂಚಾಡಿ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ತ್ರಿಪುರದಲ್ಲಿ ಸಿಪಿಐಎಂ ಕಚೇರಿಗಳ ಮೇಲಿನ ದಾಳಿ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ Rating: 5 Reviewed By: karavali Times
Scroll to Top