ಕಡಬ, ಮಾರ್ಚ್ 04, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ ಮರಿಯಮ್ಮ (47) ಅವರ ಮನೆಗೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಮರಿಯಮ್ಮ ಅವರು 5 ಜನ ಮಕ್ಕಳನ್ನು ಹೊಂದಿದ್ದು, ಗಂಡ ಮತ್ತು 3 ಜನ ಗಂಡು ಮಕ್ಕಳು ಹೊರ ಜಿಲ್ಲೆಗಳಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಪ್ರಸ್ತುತ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳಾದ ಸುಹೈಬತ್ (20) ಮತ್ತು ಸುಹೈರಾ (15) ಎಂಬವರೊಂದಿಗೆ ವಾಸ ಮಾಡಿಕೊಂಡಿದ್ದು, ಇವರು ಗುರುವಾರ (ಮಾ 3) ಕಡಬ ತಾಲೂಕು ರಾಮಕುಂಜ ಗ್ರಾಮದ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ದ್ಸಿಕ್ರ್ ಹಲ್ಕಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಸಂಜೆ ಸುಮಾರು 6 ಗಂಟೆಗೆ ತೆರಳಿದ್ದು, ಕಾರ್ಯಕ್ರಮ ಮುಗಿಸಿ ರಾತ್ರಿ ಸುಮಾರು 11 ಗಂಟೆ ವೇಳೆಗೆ ವಾಪಾಸು ಬರುವಾಗ ಮನೆಯೊಳಗೆ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿರುವುದನ್ನು ಕಂಡು ಪರಿಶೀಲನೆ ನಡೆಸಿದಾಗ ಮನೆಯ ಮೇಲಿನ ಸಿಮೆಂಟ್ ಶೀಟ್ ಯಾರೋ ತೆರೆದಿರುವುದು ಕಂಡು ಬಂದಿರುತ್ತದೆ.
ಮನೆಯೊಳಗಿನ ಕಪಾಟಿನಲ್ಲಿ ಕೂಡಾ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಅದರಲ್ಲಿದ್ದ 40 ಗ್ರಾಂ ತೂಕದ ಚಿನ್ನದ ನೆಕ್ಲೇಸ್, 20 ಗ್ರಾಂ ತೂಕದ ಚಿನ್ನದ ಫಿಟ್ ನೆಕ್ಲೇಸ್, 10 ಗ್ರಾಂ ತೂಕದ 5 ಚಿನ್ನದ ಉಂಗುರಗಳು, ಹಾಗೂ 23 ಗ್ರಾಂ ತೂಕದ ಹೊಸ ಚಿನ್ನದ ನೆಕ್ಲೆಸ್ ಸಹಿತ ಒಟ್ಟು 93 ಗ್ರಾಂ ತೂಕದ ಚಿನ್ನಾಭರಣ ಹಾಗೂ 10,700/- ನಗದು ಹಣವನ್ನು ಕಳ್ಳರು ಕಳವು ಮಾಡಿಕೊಂಡಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಕಳವಾಗಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 3,37,700/- ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಡಬ ಠಾಣಾ ಅಪರಾಧ ಕ್ರಮಾಂಕ 18/2022 ಕಲಂ 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment