ಬಂಟ್ವಾಳ, ನವೆಂಬರ್ 11, 2022 (ಕರಾವಳಿ ಟೈಮ್ಸ್) : ಪ್ರತಿಯೊಬ್ಬ ವಿದ್ಯಾರ್ಥಿಯೂ ಪಠ್ಯದ ಜೊತೆಗೆ ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಸಮಾಜ ಸೇವೆಯೊಂದಿಗೆ ವ್ಯಕ್ತಿತ್ವ ವಿಕಸನವಾಗಲು ಸಾಧ್ಯ. ವಿದ್ಯಾರ್ಥಿ ದಿಸೆಯಲ್ಲಿಯೇ ಜೀವನದ ಬೇರೆ ಬೇರೆ ಮಜಲುಗಳನ್ನು ಪರಿಚಯ ಮಾಡಿಕೊಳ್ಳುವುದರೊಂದಿಗೆ ವೈಯಕ್ತಿಕ ಬದಲಾವಣೆ ರಾಷ್ಟ್ರೀಯ ಸೇವಾ ಯೋಜನೆಯ ಬಹುಮುಖ್ಯ ಅಂಗ ಎಂದು ಉಜಿರೆ ಎಸ್ ಡಿ ಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ ಲಕ್ಷ್ಮೀನಾರಾಯಣ ಕೆ ಎಸ್ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಕಾಲೇಜು ರಾಷ್ಟ್ರೀಯ ಸೇವಾಯೋಜನೆಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಬದಲಾವಣೆಗೆ ಯುವ ಮನಸ್ಸು ಅಗತ್ಯ. ಇಂತಹ ಯುವಕರಲ್ಲಿ ಸೇವಾ ಮನೋಭಾವನೆ, ಶಿಸ್ತು, ಸಮಯ ಪ್ರಜ್ಞೆ, ನಾಗರಿಕ ಪ್ರಜ್ಞೆ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುವ ಕಾರ್ಯವನ್ನು ಎನ್ನೆಸ್ಸೆಸ್ ಮಾಡುತ್ತದೆ. ವಿದ್ಯಾಭ್ಯಾಸದ ಜೊತೆಗೆ ಸೇವೆಯನ್ನು ಮಾಡುವ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡುವ ವಿಶಾಲ ವೇದಿಕೆಯನ್ನು ಎನ್ನೆಸ್ಸೆಸ್ ಕಲ್ಪಿಸಿಕೊಡುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ ಸುಯೋಗವರ್ಧನ್ ಡಿ ಎಂ ಅವರು ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಲ್ಲಿ ಎನ್ನೆಸ್ಸೆಸ್ ಪಾತ್ರ ಮಹತ್ವವಾದುದು. ಸಮಾಜದೊಂದಿಗೆ ಹೇಗೆ ಬೆರೆಯಬೇಕು, ಕಿರಿಯರು ಹಿರಿಯರನ್ನು ಹೇಗೆ ಗೌರವಿಸಬೇಕು. ಇಂತಹ ಜೀವನ ಮೌಲ್ಯಗಳೊಂದಿಗೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಂದೇಶಗಳು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ದೊರೆಯುತ್ತದೆ. ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯುವಂತೆ ಕರೆ ನೀಡಿದರು.
ಘಟಕ 1ರ ಯೋಜನಾಧಿಕಾರಿ ಡಾ ಕಾಶೀನಾಥ್ ಶಾಸ್ತ್ರಿ ಎಚ್ ವಿ ಸ್ವಾಗತಿಸಿ, ಘಟಕ 2ರ ಯೋಜನಾಧಿಕಾರಿ ಕಿಟ್ಟು ರಾಮಕುಂಜ ವಂದಿಸಿದರು. ಸ್ವಯಂ ಸೇವಕಿಯರಾದ ಶ್ರಾವ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಸಂಪ್ರೀತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಓರಿಯೆಂಟೇಶನ್ ಕಾರ್ಯಕ್ರಮ ನಡೆಯಿತು.
0 comments:
Post a Comment