ಮಂಗಳೂರು, ನವೆಂಬರ್, 06, 2022 (ಕರಾವಳಿ ಟೈಮ್ಸ್) : ಕುಶಾಲನಗರದಿಂದ ಮಂಗಳೂರಿಗೆ ಹೂ ಮಾರಾಟಕ್ಕಾಗಿ ಹೂವಿನ ಕಟ್ಟುಗಳೊಂದಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದ ಬೇಲೂರು ಮೂಲದ ಹೂ ಮಾರಾಟ ವ್ಯಾಪಾರಿಗಳನ್ನು ಲೆಕ್ಕಕ್ಕಿಂತ ಜಾಸ್ತಿಯಾಗಿ ಲಗೇಜ್ ಟಿಕೆಟ್ ಪಡೆದಿದ್ದಲ್ಲದೆ ಅವರನ್ನು ದಬಾಯಿಸಿ ಹೆಚ್ಚುವರಿ 150 ರೂಪಾಯಿ ಲಂಚನ್ನೂ ಪೀಕಿಸಿದ ಅಮಾನವೀಯ ಘಟನೆ ವರದಿಯಾಗಿದೆ.
ಬೇಲೂರು ಮೂಲದ ಹೂ ವ್ಯಾಪಾರಿಗಳು ತುಳಸೀ ಪೂಜೆ ನಿಮಿತ್ತ ತಮ್ಮ ಹೂ ವ್ಯಾಪಾರಕ್ಕಾಗಿ ಹೂವಿನ ಕಟ್ಟುಗಳೊಂದಿಗೆ ಕುಶಲನಗರದಿಂದ ಮಂಗಳೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭ ಬಸ್ಸಿನ ನಿರ್ವಾಹಕ ನಾಲ್ಕು ಕಟ್ಟು ಹೂಗಳ ಪರವಾಗಿ ಲಗೇಜ್ ಟಿಕೆಟ್ ಎಂದು ಬರೋಬ್ಬರಿ 336/- ರೂಪಾಯಿ ಪಡೆದುಕೊಂಡಿದ್ದಾನೆ. ಲಗೇಜ್ ಟಿಕೆಟ್ ಅಲ್ಲದೆ ವ್ಯಾಪಾರಿಗಳನ್ನು ದಬಾಯಿಸಿ 150/- ರೂಪಾಯಿ ಹೆಚ್ಚುವರಿಯಾಗಿ ಲಂಚದ ರೂಪದಲ್ಲಿಯೂ ಪಡೆದುಕೊಂಡಿರುವುದಾಗಿ ವ್ಯಾಪಾರಿಗಳು ದೂರಿದ್ದಾರೆ.
ಪ್ರತಿ ಬಾರಿಯೂ ಮಂಗಳೂರಿಗೆ ಹೂ ಮಾರಾಟಕ್ಕೆಂದು ನಾವು ಬರುತ್ತಿದ್ದು, ಬಸ್ಸಿನಲ್ಲಿ ಲಗೇಜ್ ಟಿಕೆಟ್ ಎಂದು 30-40 ರೂಪಾಯಿ ಪಡೆದುಕೊಳ್ಳಲಾಗುತ್ತಿತ್ತು. ಹೊಟ್ಟೆಪಾಡಿಗಾಗಿ ಊರಿನಿಂದ ಊರಿಗೆ ಅಲೆದಾಟ ನಡೆಸಿ ವ್ಯಾಪಾರ ನಡೆಸುವ ನಮಗೆ ಇದುವೇ ದೊಡ್ಡ ಮಟ್ಟದ ಹೊರೆಯಾಗಿದ್ದು, ಆದರೂ ಕೆ.ಎಸ್.ಆರ್.ಟಿ.ಸಿ. ಅಂದರೆ ಸರಕಾರದ ಸಾರ್ವಜನಿಕ ಸೇವೆಗಿರುವ ಸಾರಿಗೆ ವ್ಯವಸ್ಥೆ ಎಂದು ನಾವು ಲಗೇಜ್ ಟಿಕೆಟ್ ಪಾವತಿಸಿ ಪ್ರಯಾಣ ಬೆಳೆಸುತ್ತಿದ್ದೇವೆ. ಆದರೆ ಈ ಬಾರಿ ಬಸ್ಸಿನ ನಿರ್ವಾಹಕ ಲಗೇಜ್ ಟಿಕೆಟ್ ಎಂದು ದುಬಾರಿ ಮೊತ್ತ ವಸೂಲಿ ಮಾಡಿದ್ದಲ್ಲದೆ ಲಂಚದ ರೂಪದಲ್ಲಿಯೂ ಮತ್ತೆ ಹೆಚ್ಚುವರಿ ಟಿಕೆಟ್ ರಹಿತ ಹಣ ಪೀಕಿಸಿರುವುದಾಗಿ ದೂರಿದ್ದಾರೆ.
ಖಾಸಗಿ ಬಸ್ಸಿನಲ್ಲಿ ನಾವು ಪ್ರಯಾಣ ಬೆಳೆಸುವುದಾದರೆ ವ್ಯಕ್ತಿಗಳ ಟಿಕೆಟ್ ಬಿಟ್ಟರೆ ಲಗೇಜ್ ಎಂದು ಹೆಚ್ಚುವರಿ ಟಿಕೆಟ್ ಪಡೆಯಲಾಗುವುದಿಲ್ಲ. ಆದರೂ ನಾವು ಸರಕಾರಿ ಸಾರಿಗೆ ನಮ್ಮ ಸಾರಿಗೆ ಎಂಬ ಉದ್ದೇಶದಿಂದ ಖಾಸಗಿ ಬಸ್ಸಿನ ಮೊರೆ ಹೋಗದೆ ಸರಕಾರಿ ಬಸ್ಸಿನಲ್ಲೇ ಪ್ರಯಾಣಿಸುವುದಾಗಿರುತ್ತದೆ. ಆದರೆ ಸರಕಾರಿ ಬಸ್ಸಿನ ನಿರ್ವಾಹಕರ ಇಂತಹ ವಸೂಲಾತಿ ಧೋರಣೆ ಹಗಲು ದರೋಡೆಯಲ್ಲದೆ ಇನ್ನೇನು ಎಂದು ಪ್ರಶ್ನಿಸಿರುವ ವ್ಯಾಪಾರಿಗಳು ಈ ಬಗ್ಗೆ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಮಂತ್ರಿಗಳು ಸಮಗ್ರ ಪರಿಶೀಲನೆ ನಡೆಸಿ ಬಡ ವ್ಯಾಪಾರಿಗಳಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿದ್ದಾರೆ.
0 comments:
Post a Comment