ಬಂಟ್ವಾಳ, ಜನವರಿ 25, 2023 (ಕರಾವಳಿ ಟೈಮ್ಸ್) : ಕೇಂದ್ರ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ಅಂಗವಾಗಿ ಗುರುವಾರ (ಜ 25) ಬಂಟ್ವಾಳ ತಾಲೂಕಾಡಳಿತದ ವತಿಯಿಂದ ರಾಷ್ಟ್ರೀಯ ಮತದಾರರ ದಿನಾಚರಣೆ ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಹಶೀಲ್ದಾರ್ ದಯಾನಂದ ಕೆ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮತದಾನದ ಮಹತ್ವದ ಬಗ್ಗೆ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಜಾಗೃತ ಮತದಾರರಾಗಿ ಮತ ಚಲಾಯಿಸಬೇಕು. ಆಗ ಉತ್ತಮ ನಾಯಕರ ಆಯ್ಕೆ ನಡೆದು ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.
ಮತದಾರರ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದ ಉಪನ್ಯಾಸಕ ಹಾಗೂ ತಾಲೂಕು ಚುನಾವಣೆಯ ಮುಖ್ಯ ತರಬೇತುದಾರರಾದ ಅಬ್ದುಲ್ ರಝಾಕ್ ಮಾತನಾಡಿ, 18 ವರ್ಷ ಪೂರೈಸಿದ ಎಲ್ಲಾ ಭಾರತೀಯ ಪ್ರಜೆಗಳೂ ಮತದಾನದ ಹಕ್ಕನ್ನು ಪಡೆಯುತ್ತಾರೆ. ಮತದಾನ ಮಾಡುವುದು ಅಭಿಮಾನದ ವಿಷಯ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂದು ಪರಿಶೀಲಿಸಿ ಖಚಿತಪಡಿಸಿಕೊಂಡು ಎಲ್ಲರೂ ತಪ್ಪದೇ ಹಕ್ಕನ್ನು ಚಲಾಯಿಸುವಂತೆ ಕರೆ ನೀಡಿದರು.
ಈ ಸಂದರ್ಭ ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ವಿಜಯ ಆರ್, ಚುನಾವಣೆ ಉಪತಹಶೀಲ್ದಾರ್ ನವೀನ್ ಬೆಂಜನಪದವು, ಬಂಟ್ವಾಳ ಹೋಬಳಿ ಕಂದಾಯ ನಿರೀಕ್ಷಕ ಜನಾರ್ದನ ಜೆ, ಗ್ರಾಮ ಆಡಳಿತ ಅಧಿಕಾರಿ ಅನಿಲ್ ಕೆ ಪೂಜಾರಿ, ಚುನಾವಣಾ ಶಾಖೆಯ ವಿಷಯ ನಿರ್ವಾಹಕ ನಾರಾಯಣ ಗೌಡ, ಚುನಾವಣೆ ಶಾಖೆಯ ಸಿಬ್ಬಂದಿಗಳು, ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಶಿಕ್ಷಕರು, ವಿದ್ಯಾರ್ಥಿಗಳು, ಬಿ ಎಲ್ ಓ ಗಳು ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವಿಶೇಷ ಸಾಧನೆಗೈದವರಿಗೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
0 comments:
Post a Comment