ಬಂಟ್ವಾಳ, ಜೂನ್ 21, 2025 (ಕರಾವಳಿ ಟೈಮ್ಸ್) : ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು. ಇಡೀ ಜಗತ್ತಿಗೆ ಭಾರತೀಯರ ಕೊಡುಗೆಯಾದ ಯೋಗಕ್ಕೆ ಜೂನ್ 21 ಅಂತರಾಷ್ಟ್ರೀಯ ಯೋಗ ದಿನವಾಗಿ ಮೀಸಲಾಗಿರುವುದು ಪ್ರಪಂಚಕ್ಕೆ ಆರೋಗ್ಯದ ಬಗ್ಗೆ ಜಾಗೃತಿಯಾಗಲು ಕಾರಣವಾಗಿದೆ. ಈ ಕಾರಣದಿಂದ ಈ ಬಾರಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಪರಿಕಲ್ಪನೆಯಲ್ಲಿ ಈ ವರ್ಷದ ಯೋಗ ದಿನವನ್ನು ಆಚರಿಸಲಾಗುತ್ತಿದೆ.
ಯೋಗಾಸನದ ವಿವಿಧ ಭಂಗಿಗಳಲ್ಲಿ ನಿಂತು, ಕುಳಿತು ಹಾಗೂ ಮಲಗಿ ಉಸಿರಾಟದ ನಿಯಮಗಳನ್ನು ಅನುಸರಿಸಿ ಶಾಲೆಯ ಸುಮಾರು 307 ವಿದ್ಯಾರ್ಥಿಗಳು ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಆಚರಿಸಿದರು.
ವಿದ್ಯಾರ್ಥಿಗಳು ತಾಡಾಸನ, ವೃಕ್ಷಾಸನ, ವಜ್ರಾಸನ, ಶಶಾಂಕಾಸನ, ಭುಜಂಗಾಸನ, ಶಲಭಾಸನ, ಪವನಮುಕ್ತಾಸನ ಹಾಗೂ ಇನ್ನೂ ಅನೇಕ ಆಸನಗಳನ್ನು ಪ್ರದರ್ಶಿಸಿದರು. ಪ್ರಾಣಾಯಾಮ, ಧ್ಯಾನ, ಸಂಕಲ್ಪ, ಶಾಂತಿ ಮಂತ್ರ ನಡೆಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮತ್ತು ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಯೋಗಾಸನದ ಬಗ್ಗೆ ಮಾಹಿತಿ ನೀಡಿದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಶೀಲ ವಿಟ್ಲ ಅವರು, ಅಷ್ಟಾಂಗ ಯೋಗವು ಮನಸ್ಸು ಮತ್ತು ದೇಹದ ಸುಂದರ ಪ್ರಕ್ರಿಯೆಗೆ ಸೇತುವಾಗಿದೆ. ನಿತ್ಯ ಮಾಡುವ ಯೋಗವು ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮನಸ್ಸಿನ ಉದ್ವೇಗ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಂಡು ಸಮಯೋಚಿತ ಸುಂದರ ಬದುಕಿಗೆ ಮುಖ್ಯವಾಗಿದೆ ಎಂದರು.
ಇದೇ ವೇಳೆ ವಿಶ್ವ ಶಾಂತಿಯನ್ನು ಪ್ರೇರೇಪಿಸುವ ವಿಶ್ವ ಯೋಗ ದಿನದ ಪ್ರತಿಜ್ಞೆಯನ್ನು ಸ್ವೀಕರಿಸಲಾಯಿತು. ಈ ಸಂದರ್ಭ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಜಗನ್ನಾಥ ಪಿ ಸ್ವಾಗತಿಸಿ, ಶಿವಕುಮಾರ್ ಎಂ ಜಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ವಿನೋದ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment