ಬಂಟ್ವಾಳ, ಆಗಸ್ಟ್ 15, 2025 (ಕರಾವಳಿ ಟೈಮ್ಸ್) : ಭಾರತ ದೇಶದ ಸ್ವಾತಂತ್ರ್ಯ ಚಳುವಳಿಯು ಅತೀ ರೋಚಕವಾದುದು. ಲಕ್ಷಾಂತರ ಜನರು ಚಳುವಳಿಯಲ್ಲಿ ದುಮುಕಿ ಹುತಾತ್ಮರಾಗಿದ್ದಾರೆ. ಈಗ ಇದು ಇತಿಹಾಸ. ಸ್ವಾತಂತ್ರ್ಯೋತ್ಸವದ ಆಚರಣೆಯ ಸಂದರ್ಭದಲ್ಲಿ ಆ ಚಳವಳಿಯ ಕುರಿತು ನಾವೆಲ್ಲ ಮನನ ಮಾಡಿಕೊಳ್ಳಬೇಕು. ಯುವಜನತೆ ದೇಶಾಭಿಮಾನ ಹೊಂದುವುದರೊಂದಿಗೆ ಇತರರಿಗೂ ದೇಶಸೇವೆಗೆ ಪ್ರೇರೇಪಿಸಬೇಕು ಎಂದು ಸಿ ಆರ್ ಪಿ ಎಫ್ ನಿವೃತ್ತ ಆಸಿಸ್ಟೆಂಟ್ ಸಬ್ ಇನ್ಸ್‍ಪೆಕ್ಟರ್ ರವಿ ಪೂಜಾರಿ ಹೇಳಿದರು.
ಬಂಟ್ವಾಳ ಎಸ್ ವಿ ಎಸ್ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು, ದೇಶದ ಸಮಗ್ರತೆಯನ್ನು ಕಾಯುವಲ್ಲಿ ಸೈನಿಕರ ಪಾತ್ರ ಮಹತ್ವವಾದುದು. ಸ್ವಾತಂತ್ರ್ಯೋತ್ಸವನ್ನು ಇಂದು ಇಡೀ ದೇಶವು ಆಚರಿಸುತ್ತಿದೆ. ಇದೊಂದು ಸಂಭ್ರಮದ ಸಂದರ್ಭ. ಈ ಸಂಭ್ರಮದ ಹಿಂದೆ ಅನೇಕರ ತ್ಯಾಗ ಬಲಿದಾನವಿದೆ. ಇಂದು ನಾವು ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಅವರ ತ್ಯಾಗ ಬಲಿದಾನಗಳಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ ಅವರು ಮಾತನಾಡಿ, ನಮ್ಮ ದೇಶದ ಸಂಸ್ಕøತಿ, ಪರಂಪರೆಯ ಉಳಿವಿಗೆ ಕಾರಣರಾದ ಸ್ವಾತಂತ್ರ ಹೋರಾಟಗಾರರು ನಮ್ಮೆಲ್ಲರಿಗೂ ಪ್ರೇರಣೆಯಾಗಿರಬೇಕು. ಆ ಮೂಲಕ ಸಂವಿಧಾನದ ಆಶ್ರಯದಲ್ಲಿರುವಂತೆ ದೇಶ ಪ್ರೇಮ, ಪರಿಸರ ಪ್ರೇಮ, ಸಾರ್ವಜನಿಕ ಸೊತ್ತುಗಳ ರಕ್ಷಣೆ, ಹಿರಿಯ ನಾಯಕರ ಬಗ್ಗೆ ಗೌರವ ಮುಂತಾದವುಗಳು ನಮ್ಮ ಕರ್ತವ್ಯವಾಗಬೇಕು. ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ತನ್ನಲ್ಲಿ ಆಳವಡಿಸಿಕೊಂಡು ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎನ್ ಸಿ ಸಿ ಅಧಿಕಾರಿ ಹಾಗೂ ಪದವಿಪೂರ್ವ ಕಾಲೇಜು ಉಪಪ್ರಾಂಶುಪಾಲ ಲೆಪ್ಟಿನೆಂಟ್ ಪ್ರದೀಪ್ ಪೂಜಾರಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸುದರ್ಶನ್ ಬಿ ಸ್ವಾಗತಿಸಿ, ಉಪನ್ಯಾಸಕ ಶಶಿಧರ್ ಎಸ್ ವಂದಿಸಿದರು. ಡಾ ಕಾಶೀನಾಥ ಶಾಸ್ತ್ರಿ ಎಚ್ ವಿ ಕಾರ್ಯಕ್ರಮ ನಿರೂಪಿಸಿದರು.





























0 comments:
Post a Comment