ಮಂಗಳೂರು, ಆಗಸ್ಟ್ 25, 2025 (ಕರಾವಳಿ ಟೈಮ್ಸ್) : ದೆಹಲಿ ವಿಧಾನಸಭೆಯಲ್ಲಿ ಆಗಸ್ಟ್ 24 ಮತ್ತು 25 ರಂದು ಬ್ರಿಟಿಷ್ ಭಾರತದಲ್ಲಿ ಕೇಂದ್ರ ಶಾಸಕಾಂಗ ಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿದ್ದ ವಿಠಲಭಾಯಿ ಪಟೇಲ್ ಅವರ ಸ್ಮರಣಾರ್ಥ ನಡೆದ ಸ್ಮರಣೋತ್ಸವದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಪಾಲ್ಗೊಂಡರು. ಈ ಸಂದರ್ಭದಲ್ಲಿ ಅವರು “ಭಾರತ-ಪ್ರಜಾಸತ್ತಾತ್ಮಕತೆಯ ತಾಯಿ” ಎಂಬ ವಿಷಯದ ಕುರಿತು ಮಾತನಾಡಿದರು.
ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಭಾಷಣ ಮಾಡಿ, ಪ್ರಜಾಪ್ರಭುತ್ವವು ಕೇವಲ ನಮ್ಮ ಆಡಳಿತ ವ್ಯವಸ್ಥೆಯಲ್ಲ, ಅದು ನಮ್ಮ ನಂಬಿಕೆ, ಅದು ನಮ್ಮ ಶಕ್ತಿ, ಅದು ನಮ್ಮ ಗುರುತು. ಪ್ರಜಾಪ್ರಭುತ್ವವೆಂದರೆ ಅಧಿಕಾರದ ಧ್ರುವೀಕರಣವಲ್ಲ ಬದಲಾಗಿ ಸಮಾಜದ ಪ್ರತಿಯೊಂದು ವರ್ಗದ, ಪ್ರತಿಯೊಂದು ಹಂತದ ಜನರ ಸಬಲೀಕರಣ ಮಾಡುವ ಮಹಾನ್ ಪ್ರಕ್ರಿಯೆ ಎಂದರು.
ಭಾರತವು ಭಾಷೆ, ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ವೈವಿಧ್ಯತೆ ಹೊಂದಿರುವ, ವೈವಿಧ್ಯತೆಯ ದೇಶ. ಈ ವೈವಿಧ್ಯತೆಯು ನಮ್ಮ ದೌರ್ಬಲ್ಯವಲ್ಲ ಅದು ನಮ್ಮ ಅಸ್ತಿತ್ವದ ಶಕ್ತಿ ಎಂದು ಭಾರತ ಇಡೀ ವಿಶ್ವಕ್ಕೆ ತೋರಿಸಿ ಕೊಟ್ಟಿದೆ. ಏಕತೆ ಎಂದರೆ ಏಕರೂಪತೆಯಲ್ಲ, ಏಕತಾನತೆಯಲ್ಲ. ಏಕತೆ ಎಂದರೆ ಸಾಮರಸ್ಯ. ಸಾಮರಸ್ಯ ಎಂದರೆ ನಮ್ಮ ಭಿನ್ನಾಭಿಪ್ರಾಯಗಳನ್ನು ಅಳಿಸಿಹಾಕಬೇಕೆಂದಲ್ಲ. ಭಿನ್ನಾಭಿಪ್ರಾಯಗಳನ್ನು ಪರಸ್ಪರ ಗೌರವಿಸಿ, ಸ್ವೀಕರಿಸಿ ಮತ್ತು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಇದೇ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಚ್ ನಿಂದ ಕಾಮರೂಪದವರೆಗೆ, ಪ್ರತಿಯೊಂದು ಭಾಷೆ, ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಸಂಪ್ರದಾಯವು ಭಾರತದ ಚಿತ್ರಪಟಕ್ಕೆ ಹೊಸ ಮೆರುಗನ್ನು, ಹೊಸ ವೈಭವವನ್ನು ನೀಡುತ್ತದೆ. ಆದ್ದರಿಂದ ಭಾರತವು ಕೇವಲ ಒಂದು ದೇಶವಲ್ಲ, ಅದು ಜೀವಂತ ನಾಗರಿಕತೆಯೇ, ಶಾಶ್ವತವಾದ ಆಧ್ಯಾತ್ಮಿಕ ಕುಟುಂಬವೇ ಆಗಿದೆ ಎಂದು ಅಭಿಪ್ರಾಯಪಟ್ಟರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೆಹಲಿಯ ಕೊಡುಗೆಯನ್ನು ವಿವರಿಸಿದ ಸ್ಪೀಕರ್ ಖಾದರ್, ಈ ಐತಿಹಾಸಿಕ ದೆಹಲಿ ನಗರದಲ್ಲಿ ನಡೆಯುತ್ತಿರುವ ಭಾರತ-ಪ್ರಜಾಪ್ರಭುತ್ವದ ಮಾತೃ ಭೂಮಿ ಎನ್ನುವ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನನಗೆ ಹೆಮ್ಮೆಯೂ ಸಂತೋಷವೂ ಆಗುತ್ತಿದೆ, ಯಾಕೆಂದರೆ ದೆಹಲಿ ನಗರವು ಕೇವಲ ಭಾರತದ ರಾಜಧಾನಿ ಮಾತ್ರವಲ್ಲ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಪ್ರಬಲ ವೇದಿಕೆ ಕೂಡ ಆಗಿದೆ. ಖಿಲಾಫತ್ ಚಳವಳಿಯಿಂದ ಜಾಮಾ ಮಸೀದಿಯ ಹೋರಾಟದವರೆಗೆ, ಎಲ್ಲರೂ ಧರ್ಮ, ಜಾತಿ, ಸಮುದಾಯವೆನ್ನದೆ ಸಂಘಟಿತರಾಗಿ ಬ್ರಿಟಿಷರ ವಿರುದ್ಧ ಅಚಲವಾಗಿ ನಿಂತರು. ಮಹಾತ್ಮ ಗಾಂಧಿಯವರು ಈ ಚಳವಳಿಯನ್ನು ಅಸಹಕಾರ ಚಳವಳಿಯೊಂದಿಗೆ ಜೋಡಿಸಿ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ಏಕೀಕೃತ, ರಾಷ್ಟ್ರೀಯ ಗುರುತನ್ನು ನೀಡಿ, ರಾಷ್ಟ್ರವ್ಯಾಪಿ ಕ್ರಾಂತಿಗೆ ಕಾರಣರಾದರು ಎಂದರು.
ಕರ್ನಾಟಕದ ಕ್ರಾಂತಿಯನ್ನು ವಿವರಿಸಿದ ಖಾದರ್, ಕರ್ನಾಟಕದಲ್ಲಿ 1880ರ ದಶಕದಲ್ಲಿ ಮೈಸೂರು ಮಹಾರಾಜರ ಆಶ್ರಯದಲ್ಲಿ ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ಬ್ರಿಟಿಷ್ ಆಡಳಿತದ ವಿರುದ್ಧ ಧ್ವನಿ ಎತ್ತಿದರು. ಭಾರತ ಸಂವಿಧಾನ ರಚನೆಯ ದಶಕಕ್ಕೂ ಮೊದಲು ಭಾರತದಲ್ಲಿ ಮೀಸಲಾತಿಯ ಮೊದಲ ಅನುಷ್ಠಾನದ ಪ್ರಯತ್ನವು 1918 ರಲ್ಲಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೇತೃತ್ವದಲ್ಲಿ ನಡೆಯಿತು. ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ತರಲು, ಮೀಸಲಾತಿ ಪ್ರತಿನಿಧಿತ್ವವನ್ನು ಅಧ್ಯಯನ ಮಾಡಿ ವರದಿ ನೀಡಲು ಮಿಲ್ಲರ್ ಸಮಿತಿಯನ್ನು ನೇಮಿಸಿದರು. ಇದರಿಂದ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣವು ಹಿಂದುಳಿದ ಹಾಗೂ ಶೋಷಿತ ವರ್ಗದವರಿಗೂ ದೊರಕುವಂತಾಯಿತು. ಈ ಕ್ರಾಂತಿಕಾರಿ ಹೆಜ್ಜೆಯು ಭಾರತದಾದ್ಯಂತ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ನೀಡಿದ ದೊಡ್ಡ ಕೊಡುಗೆಯಾಯಿತು. ಡಾ ಬಿ ಆರ್ ಅಂಬೇಡ್ಕರ್ ನಮ್ಮ ಸಂವಿಧಾನವನ್ನು ರೂಪಿಸಿದಾಗ, ಮೈಸೂರಿನ ಈ ಮಾದರಿಯನ್ನು ಹೆಮ್ಮೆಯಿಂದ ಸ್ಮರಿಸಲಾಯಿತು ಎಂದರು.
ಇಷ್ಟು ಮಾತ್ರವಲ್ಲದೆ, 12 ನೇ ಶತಮಾನದ ಆರಂಭದಲ್ಲಿಯೇ, ಮಹಾನ್ ಸಮಾಜ ಸುಧಾರಕ ಜಗದ್ಗುರು ಬಸವಣ್ಣನವರು ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿ ಉಳಿಯದೆ ಎಲ್ಲ ವರ್ಣ, ಲಿಂಗ, ಧರ್ಮ, ಜಾತಿ ಬೇಧವಿಲ್ಲದೆ, ಪ್ರತಿಯೊಬ್ಬರೂ ಸಮಾನ ಹಕ್ಕಿನಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ವೇದಿಕೆಯಾಗಿತ್ತು. ಆದ್ದರಿಂದ ಪ್ರಜಾಪ್ರಭುತ್ವವೆಂಬುದು ನಮಗೆ ಹೊರಗಿನ ಪ್ರಪಂಚದಿಂದ ಬಂದ ಉಡುಗೊರೆಯಲ್ಲ, ಅದು ನಮ್ಮ ಮಣ್ಣಿನಲ್ಲೇ ಮೊಳಕೆಯೊಡೆದ ಗಿಡ. ನಮ್ಮ ಸಂಸ್ಕಾರಗಳಿಂದ ಪೆÇೀಷಿಸಲ್ಪಟ್ಟು ನಮ್ಮೆಲ್ಲರಲ್ಲಿ ರಕ್ತಗತವಾಗಿದೆ. ಹಳ್ಳಿಯಲ್ಲಿರುವ ಚಿಕ್ಕ ಪಂಚಾಯತಿನಿಂದ ಹಿಡಿದು ದೆಹಲಿಯ ಭವ್ಯ ಲೋಕಸಭೆಯವರೆಗೆ, ಪ್ರತಿಯೊಬ್ಬ ಭಾರತೀಯನು ಆಡಳಿತದಲ್ಲಿ ಪಾಲುದಾರನಾಗುವ ಜವಾಬ್ದಾರಿಯನ್ನು, ಹಕ್ಕನ್ನು ಪ್ರಜಾಪ್ರಭುತ್ವವು ನಮಗೆ ನೀಡಿದೆ. ಆದ್ದರಿಂದ ಭಾರತವು ಪ್ರಜಾಪ್ರಭುತ್ವದ ಮಾತೃಭೂಮಿ ಎನ್ನುವುದು ನಿತ್ಯ ಸತ್ಯ ಎಂದು ಸ್ಪೀಕರ್ ಖಾದರ್ ನಿರೂಪಿಸಿದರು. ಈ ಸಮ್ಮೇಳನದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಸಹಿತ ದೇಶದ ವಿವಿಧ ರಾಜ್ಯಗಳ ಸ್ಪೀಕರ್ ಗಳು ಭಾಗವಹಿಸಿದ್ದರು.













0 comments:
Post a Comment