ಬಂಟ್ವಾಳ, ಸೆಪ್ಟೆಂಬರ್ 08, 2025 (ಕರಾವಳಿ ಟೈಮ್ಸ್) : ಸ್ಕೂಟರ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಎರಡೂ ದ್ವಿಚಕ್ರ ವಾಹನದಲ್ಲಿದ್ದ ನಾಲ್ವರು ಸವಾರರು ಗಾಯಗೊಂಡ ಘಟನೆ ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿ ಸೆ 6 ರಂದು ರಾತ್ರಿ ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ವಿಟ್ಲ ಕಸಬಾ ಗ್ರಾಮದ ಕೊಳಂಬೆ ನಿವಾಸಿಗಳಾದ ಮಹಮ್ಮದ್ ರಮೀಝ್ (23) ಮಹಮ್ಮದ್ ಸಾನಿದ್ ಹಾಗೂ ಬೈಕ್ ಸವಾರರಾದ ಮುಹಮ್ಮದ್ ಆಸೀರ್ ಹಾಗೂ ಮುಹಮ್ಮದ್ ಶಾಝ್ ಎಂದು ಹೆಸರಿಸಲಾಗಿದೆ.
ಮಹಮ್ಮದ್ ರಮೀಝ್ ಅವರು ಸೆ 6 ರಂದು ಸ್ಕೂಟರಿನಲ್ಲಿ ಸವಾರನಾಗಿ, ಮಹಮ್ಮದ್ ಸಾನಿದ್ ಎಂಬಾತನನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಪುತ್ತೂರು ಕಡೆಯಿಂದ ವಿಟ್ಲ ಕಡೆಗೆ ಪುತ್ತೂರು-ವಿಟ್ಲ ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ ಸುಮಾರು 8.15ರ ವೇಳೆಗೆ ಇಡ್ಕಿದು ಗ್ರಾಮದ ಉರಿಮಜಲು ಜಂಕ್ಷನ್ ತಲುಪಿದಾಗ, ಎದುರಿನಿಂದ ಅಂದರೆ ವಿಟ್ಲ ಕಡೆಯಿಂದ ಕಬಕ ಕಡೆಗೆ ಮುಹಮ್ಮದ್ ಆಸಿರ್ ಎಂಬಾತ ಮುಹಮ್ಮದ್ ಶಾಝ್ ಎಂಬಾತನನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಬರುತ್ತಿದ್ದ ಬೈಕನ್ನು ಅಜಾಗರೂಕತೆ ಹಾಗೂ ದುಡುಕಿನಿಂದ ಯಾವುದೇ ಸೂಚನೆ ನೀಡದೆ ಒಮ್ಮೆಲೇ ಕಾರ್ಯಾಡಿ ಕಡೆಗೆ ಹೋಗುವ ರಸ್ತೆ ಕಡೆಗೆ ತಿರುಗಿಸಿ ಚಲಾಯಿಸಿದ ಪರಿಣಾಮ, ರಮೀಝ್ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳ ಸಮೇತ ಸವಾರರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರ ರಮೀಝ್ ಹಾಗೂ ಸಾನಿದ್ ಅವರನ್ನು ಪುತ್ತೂರು ಮಹಾವೀರ ಹಾಗೂ ಪ್ರಗತಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ತಲೆ, ಕೈ, ಕಾಲು ಮೊದಲಾದೆಡೆ ಗಂಭೀರ ಗಾಯಗೊಂಡಿದ್ದ ಸಾನಿದ್ ಅವರನ್ನು ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ.
ಗಾಯಗೊಂಡ ಬೈಕ್ ಸವಾರರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment