ಸಮೀಕ್ಷೆಯಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದ ಜನರ ವಿವರ ಪಡೆಯಲಾಗುವುದು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ - Karavali Times ಸಮೀಕ್ಷೆಯಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದ ಜನರ ವಿವರ ಪಡೆಯಲಾಗುವುದು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ - Karavali Times

728x90

15 September 2025

ಸಮೀಕ್ಷೆಯಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದ ಜನರ ವಿವರ ಪಡೆಯಲಾಗುವುದು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ

ಮಂಗಳೂರು, ಸೆಪ್ಟೆಂಬರ್ 15, 2025 (ಕರಾವಳಿ ಟೈಮ್ಸ್) : ರಾಜ್ಯ ಹಿಂದುಳಿದ ವರ್ಗ ಆಯೋಗ ನಡೆಸುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದ ಎಲ್ಲಾ ವರ್ಗದ ಜನರ ಸಮೀಕ್ಷೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದ ಪೂರ್ವ ಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಈ ಸಮೀಕ್ಷೆಯಲ್ಲಿ ಸಮಾಜದ ಎಲ್ಲಾ ಜಾತಿ, ಧರ್ಮ ಮತ್ತು ವರ್ಗಗಳ ಪ್ರತಿಯೊಬ್ಬರ ವಿವರಗಳನ್ನು ಪಡೆಯಲಾಗುವುದು. ಈಗಾಗಲೇ ಪ್ರತಿ ಮನೆಗೆ  ಸ್ಟಿಕ್ಕರ್ ಅಂಟಿಸಲಾಗಿದ್ದು,  ಇದರ ಆಧಾರದ ಮೇಲೆ ಜಿಪಿಎಸ್ ಮಾಹಿತಿಯೊಂದಿಗೆ ಸಮೀಕ್ಷೆ ನಡೆಸಲಾಗುವುದು. ಪ್ರತಿ ಮನೆಗೂ ಗಣತಿದಾರರು ಬಂದು ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಿದ್ದಾರೆ ಎಂದರು. 

ಸಮೀಕ್ಷೆದಾರರು ವಿವಿಧ 60 ಪ್ರಶ್ನೆಗಳಿಗೆ ಮಾಹಿತಿಯನ್ನು ಪಡೆಯಲಿದ್ದಾರೆ. ಸಮೀಕ್ಷೆಯಲ್ಲಿ ಪ್ರತಿಯೊಬ್ಬರ ಕುಟುಂಬ ಶೈಕ್ಷಣಿಕ, ವೈವಾಹಿಕ ಸ್ಥಾನಮಾನ, ಸರಕಾರದಿಂದ ಪಡೆದ ಸೌಲಭ್ಯಗಳು, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ವಿವರ, ಜಮೀನು ವಿವರ, ಕೃಷಿ ಜಾನುವಾರು, ಕುಡಿಯುವ ನೀರು, ನಿವೇಶನ, ಶೌಚಾಲಯ, ಮತ್ತಿತರ ಮಾಹಿತಿ ಪಡೆಯಲಿದ್ದಾರೆ.  ಹೀಗಾಗಿ ಇದೊಂದು ಸಮಗ್ರ ಸಮೀಕ್ಷೆಯಾಗಿದ್ದು, ಜನರು ಹೇಗಿದ್ದಾರೆ ಎಂಬುದರ ಬಗ್ಗೆ ಸರಕಾರಕ್ಕೆ ಸಮಗ್ರ ಮಾಹಿತಿ ತಿಳಿಯಲಿದೆ. ಇದರಿಂದ ದೊರಕುವ ಮಾಹಿತಿಯು ಸರಕಾರದ ನೀತಿ ನಿರೂಪಣೆಯಲ್ಲಿ ಹಾಗೂ  ವಿವಿಧ ಯೋಜನೆಗಳ ಜಾರಿಗೆ ಸಹಕಾರಿಯಾಗುವುದು ಎಂದರು. 

ಸಮೀಕ್ಷೆಯಲ್ಲಿ ಯಾವುದೇ ವಿವಾದಾತ್ಮಕ ಪ್ರಶ್ನೆಗಳು ಇರುವುದಿಲ್ಲ. ಪ್ರತಿ ಮನೆಯ ಸಮೀಕ್ಷೆಗೆ ಅಂದಾಜು 40 ನಿಮಿಷ ಸಮಯದ ತಗುಲಲಿದ್ದು, ಪ್ರತಿ ದಿನ 10 ಮನೆಗಳ ಸಮೀಕ್ಷೆ ನಡೆಸಲಿದ್ದಾರೆ ಎಂದ ಮದ್ದಿನೇನಿ ಸಮೀಕ್ಷೆಗೆ ಶಿಕ್ಷಕರು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳ ಸಿಬ್ಬಂಧಿಗಳನ್ನು ಬಳಸಲಾಗುವುದು. ಮನೆಗೆ  ಸಮೀಕ್ಷೆದಾರರು ಬಂದಾಗ ಸರಿಯಾದ ಮಾಹಿತಿ ನೀಡಿ ಜನರು ಸಹಕರಿಸಬೇಕು ಎಂದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಮೀಕ್ಷೆಯಲ್ಲಿ ಎಲ್ಲಾ ಜಾತಿ, ಧರ್ಮ ಹಾಗೂ ವರ್ಗದ ಜನರ ವಿವರ ಪಡೆಯಲಾಗುವುದು : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ Rating: 5 Reviewed By: karavali Times
Scroll to Top