ಬಂಟ್ವಾಳ, ಅಕ್ಟೋಬರ್ 30, 2025 (ಕರಾವಳಿ ಟೈಮ್ಸ್) : ತಾಲೂಕಿನ ಕುಕ್ಕಾಜೆ ಸರಕಾರಿ ಶಾಲೆಯ ಹೆಣ್ಣು ಮಕ್ಕಳಿಗೋಸ್ಕರ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ (ಎಸ್ ಐ ಓ) ಪಾಣೆಮಂಗಳೂರು ಘಟಕದ ಪದಾಧಿಕಾರಿಗಳುಗೆ ಶೌಚಾಲಯ ನಿಮಾಣ ಮಾಡಿ ಸಹಕರಿಸಿದ್ದಾರೆ. ದಾನಿಗಳಿಂದ ಸಂಗ್ರಹಿಸಿದ ಸುಮಾರು 56 ಸಾವಿರ ರೂಪಾಯಿ ವೆಚ್ಚದಲ್ಲಿ ಶಾಲಾ ಹೆಣ್ಣು ಮಕ್ಕಳಿಗಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಿ ಇತ್ತೀಚೆಗೆ ಹಸ್ತಾಂತರಿಸಲಾಗಿದೆ.
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಎಸ್ ಐ ಓ ಕರ್ನಾಟಕ ಘಟಕದ ವತಿಯಿಂದ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ “ಪ್ರವಾದಿ ಮುಹಮ್ಮದ್ (ಸ) ಮಾದರಿ ಶಿಕ್ಷಕ” ಎಂಬ ಅಭಿಯಾನ ಹಮ್ಮಿಕೊಂಡಿತ್ತು. ಈ ಅಭಿಯಾನದ ಭಾಗವಾಗಿ ಎಲ್ಲ ಶಾಲೆಗಳಿಗೆ ಎಸ್ ಐ ಓ ಪದಾಧಿಕಾರಿಗಳು ತೆರಳಿ, ಶಿಕ್ಷಕರಿಗೆ ಉಡುಗೊರೆ ನೀಡಿ ಗೌರವಿಸಿದ್ದರು. ಈ ಸಂದರ್ಭ ಕುಕ್ಕಾಜೆ ಸರಕಾರಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ ಅವರು, ಶಾಲೆಯಲ್ಲಿ ಹೆಣ್ಣು ಮಕ್ಕಳು ಶೌಚಾಲಯದ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ವಿದ್ಯಾರ್ಥಿ ಸಂಘಟನೆಗೆ ಮಾಹಿತಿ ನೀಡಿದ್ದರು. ಈ ವೇಳೆ ತಮ್ಮಿಂದಾದ ನೆರವು ನೀಡುವುದಾಗಿ ಎಸ್ ಐ ಓ ಪಾಣೆಮಂಗಳೂರು ಘಟಕಾಧ್ಯಕ್ಷ ಮುಬಾರಿಶ್ ಚೆಂಡಾಡಿ ಭರವಸೆ ನೀಡಿದ್ದರು.
ಈ ಬಗ್ಗೆ ಎಸ್ ಐ ಒ ಪದಾಧಿಕಾರಿಗಳು ದಾನಿಗಳ ಸಹಕಾರ ಕೋರಿದ್ದರು. ಮನವಿಗೆ ಸ್ಪಂದಿಸಿದ ದಾನಿಯೋರ್ವರು 25 ಸಾವಿರ ರೂಪಾಯಿ ನೀಡಿದರೆ, ಜಮಾಅತೆ ಇಸ್ಲಾಮೀ ಹಿಂದ್ ಸಮಾಜ ಸೇವಾ ಘಟಕದ ಪಾಣೆಮಂಗಳೂರು ಹಾಗೂ ಮಂಗಳೂರು ಘಟಕವು ಒಟ್ಟು 30 ಸಾವಿರ ರೂಪಾಯಿಗಳ ನೆರವು ನೀಡಿದೆ.
ಶೌಚಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್ ಐ ಓ ಪಾಣೆಮಂಗಳೂರು ಘಟಕಾಧ್ಯಕ್ಷ ಮುಬಾರಿಶ್ ಚೆಂಡಾಡಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಶೋಭಾ, ಮಂಚಿ ಗ್ರಾ ಪಂ ಅಧ್ಯಕ್ಷ ಇಬ್ರಾಹಿಂ, ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಘಟಕಾಧ್ಯಕ್ಷ ಮುಖ್ತಾರ್ ಅಹ್ಮದ್ ಬೋಳಂಗಡಿ, ಎಸ್ ಐ ಓ ರಾಜ್ಯ ಕಾರ್ಯದರ್ಶಿ ಆಸಿಫ್ ಡಿ ಕೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಕೆ, ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಬಂಟ್ವಾಳ ತಾಲೂಕು ಕ್ಯಾಪ್ಟನ್ ಅಬ್ದುಲ್ ಸತ್ತಾರ್ ಗೂಡಿನಬಳಿ, ಎಂ ಎಚ್ ಅಬ್ದುಲ್ ಶುಕೂರ್ ಬೋಳಂಗಡಿ, ಶಂಶೀರ್ ಮೆಲ್ಕಾರ್, ಶರೀಫ್ ಮೆಲ್ಕಾರ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ವೇಳೆ ಶಾಲೆಗೆ ಶೌಚಾಲಯ ನಿರ್ಮಿಸಿಕೊಟ್ಟದ್ದಕ್ಕಾಗಿ ಎಸ್ ಐ ಓ ಪದಾಧಿಕಾರಿಗಳನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.





















0 comments:
Post a Comment