ಪುತ್ತೂರು, ಅಕ್ಟೋಬರ್ 22, 2025 (ಕರಾವಳಿ ಟೈಮ್ಸ್) : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರ ಮಂಗಳ ಎಂಬಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನ ತಡೆದ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ಕೊಲೆಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಬುಧವಾರ ಮುಂಜಾನೆ ವೇಳೆ ಸಂಭವಿಸಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಎಂಬಲ್ಲಿ ಅ 22 ರಂದು ಮುಂಜಾನೆ ಆರೋಪಿ ಕಾಸರಗೋಡು ನಿವಾಸಿ ಅಬ್ದುಲ್ಲಾ (40 ವರ್ಷ) ಎಂಬಾತ ಈಚರ್ ವಾಹನದಲ್ಲಿ 12 ಜಾನುವಾರಗಳನ್ನು ಸಾಗಿಸುತ್ತಿದ್ದನು. ಆತನೇ ಚಾಲಕನಾಗಿದ್ದು, ಇನ್ನೊಬ್ಬ ಆರೋಪಿಯೂ ವಾಹನದಲ್ಲಿದ್ದ. ವಾಹನವನ್ನು ನಿಲ್ಲಿಸಲು ಪೊಲೀಸರು ಸೂಚಿಸಿದಾಗ ಆತನು ನಿಲ್ಲಿಸದೆ ಇದ್ದು, ಪೊಲೀಸರು ಸುಮಾರು 10 ಕಿಮೀ ದೂರ ವಾಹನವನ್ನು ಬೆನ್ನಟ್ಟಿದ್ದಾರೆ. ಪೊಲೀಸ್ ವಾಹನ ಅಕ್ರಮ ಜಾನುವಾರು ಸಾಗಾಟದ ವಾಹನವನ್ನು ಹಿಂದಿಕ್ಕಿದಾಗ ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಲ್ಲದೆ ಚೂರಿ ತರದ ಆಯುಧದಿಂದ ದಾಳಿಗೆ ಯತ್ನಿಸಿದ್ದಾನೆ. ಆಗ ಪಿಎಸ್‍ಐ ಅವರು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಗುಂಡು ಈಚರ್ ವಾಹನದ ಮೇಲೆ ಹಾಗೂ ಮತ್ತೊಂದು ಗುಂಡು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆಯ ಸಮಯದಲ್ಲಿ ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಚಿಕಿತ್ಸೆಯ ಬಗ್ಗೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದು, ತನಿಖೆ ಮುಂದುವರಿಸಲಾಗಿದೆ. ಪರಾರಿಯಾದ ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಆರೋಪಿಗಳ ಈಚರ್ ವಾಹನದಲ್ಲಿ 7 ಎಮ್ಮೆ, 2 ಕೋಣ, 2 ಹಸು, 2 ಹೋರಿ ಸಹಿತ ಒಟ್ಟು 12 ಜಾನುವಾರುಗಳಿತ್ತು. ಹಾಸನ ಕಡೆಯಿಂದ ಈ ಜಾನುವಾರುಗಳನ್ನು ತರಲಾಗಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಆರೋಪಿಯ ವಿರುದ್ದ ಈ ಹಿಂದೆ ಜುಲೈ ತಿಂಗಳಲ್ಲಿ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 33/2025 ರಂತೆ ಗೋಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಎಸ್ಪಿ ಡಾ ಅರುಣ್ ಕೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.






























0 comments:
Post a Comment