ಮಂಗಳೂರು, ಅಕ್ಟೋಬರ್ 19, 2025 (ಕರಾವಳಿ ಟೈಮ್ಸ್) : ಮಂಗಳೂರು ನಗರ, ದ.ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ದಾಖಲಾದ ಒಟ್ಟು 9 ವಂಚನೆ ಪ್ರಕರಣಗಳಲ್ಲಿ ಭಾಗಿಯಾದ ವಂಚಕಿ ಚಾಲಾಕಿ ಮಹಿಳೆಯೋರ್ವರನ್ನು ಬರ್ಕೆ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ವಂಚಕಿಯನ್ನು ಮಂಗಳೂರು ತಾಲೂಕು, ಮುತ್ತೂರು ಗ್ರಾಮದ ಕುಪ್ಪೆಪದವು ಸಮೀಪದ ಮುರಾ ನಿವಾಸಿ ರಮೀಜ್ ರಾಜಾ ಎಂಬವರ ಪತ್ನಿ ಫರೀದಾ ಬೇಗಂ ಅಲಿಯಾಸ್ ಫರೀದಾ (28) ಎಂದು ಹೆಸರಿಸಲಾಗಿದೆ.
ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಕದ್ದಮೆ ಸಂಖ್ಯೆ 77/2025 ಕಲಂ 316(2), 318(2), 3(5) ಬಿ ಎನ್ ಎಸ್-2023 ಪ್ರಕರಣದಲ್ಲಿ ದೂರುದಾರ ಜಯರಾಯ ಅವರು ಮಂಗಳೂರು ನಗರದ ಎಂಪಾಯರ್ ಮಾಲ್ ನಲ್ಲಿ ಲ್ಯಾಪ್ ಟಾಪ್ ಬಜಾರ್ ಎಂಬ ಸ್ಟೋರ್ ಇಟ್ಟುಕೊಂಡು ಎಲ್ಲಾ ಕಂಪೆನಿಗಳ ಲ್ಯಾಪ್ ಟಾಪ್ ಗಳನ್ನು ಸೇಲ್ಸ್ ಮತ್ತು ಸರ್ವಿಸ್ ಮಾಡಿಕೊಂಡಿದ್ದರು. ಸದ್ರಿಯವರ ಅಂಗಡಿಯಿಂದ ಆಪಲ್ ಕಂಪೆನಿಯ ಮ್ಯಾಕ್ ಬುಕ್ ಪ್ರೊ ಲ್ಯಾಪ್ ಟಾಪ್, ಡೆಲ್ ಕಂಪೆನಿಯ ಲ್ಯಾಪ್ ಟಾಪ್ ಮತ್ತು ಆಪಲ್ ಕಂಪೆನಿಯ ಮ್ಯಾಕ್ ಬುಕ್ ಪ್ರೊ ಲ್ಯಾಪ್ ಟಾಪ್ ನ್ನು ಆರೋಪಿ ಫರಿಧಾ ಬೇಗಂ ಅಲಿಯಾಸ್ ಫರಿದಾ ಎಂಬಾಕೆ ತನ್ನ ಪರಿಚಯದ ವ್ಯಕ್ತಿಯ ಮೂಲಕ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಲ್ಯಾಪ್ ಟಾಪ್ ಗಳನ್ನು ಖರೀದಿಸಿಕೊಂಡು ಒಟ್ಟು 1.98 ಲಕ್ಷ ರೂಪಾಯಿ ಹಣ ಪಾವತಿಸದೆ ಮೋಸ ಮಾಡಿದ ಫರೀದಾ ಬೇಗಂ ಎಂಬವಳನ್ನು ಬರ್ಕೆ ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಮೋಹನ ಕೊಟ್ಟಾರಿ ಅವರ ನೇತೃತ್ವದಲ್ಲಿ ಪ್ರಕರಣದ ತನಿಖಾಧಿಕಾರಿ ವಿನಾಯಕ ತೊರಗಲ್ ಮತ್ತು ಮಹಿಳಾ ಸಿಬ್ಬಂದಿಗಳ ಸಹಕಾರದಿಂದ ಪತ್ತೆ ಮಾಡಿ ವಶಕ್ಕೆ ಪಡೆದು ದಸ್ತಗಿರಿ ಮಾಡಿ ಆರೋಪಿತೆಯನ್ನು ಅ 19 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ 3 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಬಂಧಿತ ವಂಚಕಿಯು ಪ್ರತಿಷ್ಠಿತ ಚಿನ್ನಾಭರಣಗಳ ಹಾಗೂ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಭೇಟಿ ಮಾಡಿ ತನ್ನ ಮಾತುಗಳಿಂದ ಅಂಗಡಿ ಮಾಲಕರನ್ನು ನಂಬಿಸಿ, ವಿವಿಧ ಬ್ಯಾಂಕುಗಳ ಮಾನ್ಯತೆ ಇಲ್ಲದ ಚೆಕ್ ಗಳನ್ನು ನೀಡಿ ಬೆಲೆಬಾಳುವ ಸೊತ್ತುಗಳನ್ನು ಖರೀದಿಸಿ ಮೋಸಗೊಳಿಸಿರುವ ಬಗ್ಗೆ ಈಕೆಯ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣವಲ್ಲದೆ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ, ಬಜಪೆ ಪೊಲೀಸ್ ಠಾಣೆ, ಮೂಡಬಿದ್ರೆ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಮೋಸ, ವಂಚನೆಯ ಪ್ರಕರಣಗಳು ಮತ್ತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 3 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಒಂದು ಮೋಸ ವಂಚನೆಯ ಪ್ರಕರಣ ದಾಖಲಾಗಿದೆ. ಅಲ್ಲದೇ ಆರೋಪಿತಳು ಮುಲ್ಕಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯವು ಆರೋಪಿತಳ ವಿರುದ್ದ ವಾರೆಂಟ್ ಕೂಡಾ ಹೊರಡಿಸಿರುತ್ತದೆ. ಹಾಗೂ ಕಾವೂರು ಮತ್ತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ದಸ್ತಗಿರಿಯಾಗದೆ ತಲೆಮರೆಸಿಕೊಂಡಿದ್ದಳು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದಾರೆ.































0 comments:
Post a Comment