ಬಂಟ್ವಾಳ, ಅಕ್ಟೋಬರ್ 24, 2025 (ಕರಾವಳಿ ಟೈಮ್ಸ್) : ತಾನೇ ನೆಟ್ಟಿದ್ದ ತೆಂಗಿನ ಮರದಿಂದ ತೆಂಗಿನ ಕಾಯಿ ತೆಗೆಯುತ್ತಿದ್ದ ತಂದೆಗೆ ಪುತ್ರನೇ ತಕರಾರು ತೆಗೆದು ಕತ್ತಿಯಿಂದ ಕಡಿಯಲು ಯತ್ನಿಸಿದ್ದಲ್ಲದೆ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಗ್ರಾಮದ ಪುತ್ತಿಲ-ಪಾಲೆದು ಎಂಬಲ್ಲಿ ಅ 22 ರಂದು ಸಂಜೆ ವೇಳೆ ನಡೆದಿದೆ.
ಗಾಯಗೊಂಡ ತಂದೆಯನ್ನು ಸ್ಥಳೀಯ ನಿವಾಸಿ ನೇಮು ನಾಯ್ಕ್ (65) ಎಂದು ಹೆಸರಿಸಲಾಗಿದೆ. ಆರೋಪಿ ಮಗನನ್ನು ಉಮೇಶ ಎಂದು ಗುರುತಿಸಲಾಗಿದೆ.
ನೇಮು ನಾಯ್ಕ ಅವರು ತಣ್ಣೀರುಪಂಥ ಗ್ರಾಮದ ಪಾಲೆದು ಎಂಬಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು, 94(ಸಿ) ಅಡಿಯಲ್ಲಿ 9 ಸೆಂಟ್ಸ್ ಅಧಿಕೃತ ದಾಖಲೆ ಇರುವ ಜಾಗ ಹಾಗೂ 2 ಎಕ್ರೆ ಸ್ವಾದೀನಪಡಿಸಿಕೊಂಡ ಸರಕಾರಿ ಜಾಗದಲ್ಲಿ ಕೃಷಿ ಮಾಡಿಕೊಂಡಿರುತ್ತಾರೆ. ಹೀಗಿರುತ್ತಾ 2021ರಲ್ಲಿ ಇವರ 3ನೇ ಮಗ ಆಪಾದಿತ ಉಮೇಶನು ತಂದೆ ಹಾಗೂ ಮಕ್ಕಳೆಲ್ಲಾ ಸೇರಿ ಹೊಸದಾಗಿ ಮನೆಯೊಂದನ್ನು ಕಟ್ಟುವ ಎಂದು ತಿಳಿಸಿದಕ್ಕೆ ಎಲ್ಲರೂ ಒಪ್ಪಿ ಹಣ ಹಾಕಿ ಮನೆಯನ್ನು ನಿರ್ಮಿಸಿರುತ್ತಾರೆ. ನಂತರ ಆಪಾದಿತ ಮಗ ಉಮೇಶನಿಗೆ ಮದುವೆಯಾಗಿ ತಂದೆ-ತಾಯಿ ಹಾಗೂ ಸಹೋದರರನ್ನು ಮನೆಯಿಂದ ಹೊರ ಹಾಕಿರುತ್ತಾನೆ. ಆ ಬಳಿಕ ತಂದೆ-ತಾಯಿ ಉಳಿದ ಮಕ್ಕಳ ಜೊತೆ ಹಳೆ ಮನೆಯಲ್ಲಿಯೇ ವಾಸವಾಗಿದ್ದರು. ಪ್ರತಿಯೊಂದು ವಿಚಾರಕ್ಕೂ ಉಮೇಶನು ತಕರಾರು ಮಾಡಿ, ಜಗಳ ಮಾಡಿ ಕೃಷಿ ಉತ್ಪನ್ನಗಳನ್ನು ತಾನೇ ತೆಗೆದು ಮಾರಾಟ ಮಾಡುತ್ತಿದ್ದನು.
ಅ 22 ರಂದು ಸಂಜೆ 4 ಗಂಟೆ ವೇಳೆಗೆ ದೀಪಾವಳಿ ಹಬ್ಬವಾಗಿದ್ದರಿಂದ ನೇಮು ನಾಯ್ಕ ಅವರು ತೆಂಗಿನ ಕಾಯಿ ತರಲೆಂದು ಅವರೇ ನೆಟ್ಟ ತೆಂಗಿನ ಮರದಿಂದ ದೋಂಟಿಯಿಂದ ಒಂದೆರಡು ತೆಂಗಿನ ಕಾಯಿ ತೆಗೆದಿದ್ದನ್ನು ಕಂಡು ಉಮೇಶನು ಹೊಸ ಮನೆಯೊಳಗಿಂದ ತಂದೆಯನ್ನು ನೋಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮನೆಯೊಳಗಿನಿಂದ ತಲವಾರಿನಂತಹ ಉದ್ದದ ಕತ್ತಿಯನ್ನು ತೆಗೆದುಕೊಂಡು ಬಂದು ನಿನ್ನನ್ನು ಇವತ್ತು ಸಾಯಿಸದೇ ಬಿಡುವುದಿಲ್ಲ ಎಂದು ಹೇಳಿ, ಬಲ ಕೈಗೆ ಕಡಿಯಲು ಕತ್ತಿ ಬೀಸಿದಾಗ ತಂದೆ ನೇಮು ನಾಯ್ಕ ಅವರು ತಪ್ಪಿಸಿದ್ದು, ಕತ್ತಿಯ ಚೂಪಾದ ತುದಿ ಅವರ ಕೈಯ ರಟ್ಟೆಗೆ ಚುಚ್ಚಿ ಗಂಬೀರ ಸ್ವರೂಪದ ಗಾಯವಾಗಿರುತ್ತದೆ. ನಂತರ ಅವರನ್ನು ಕೈಯಿಂದ ನೆಲದ ಮೇಲೆ ದೂಡಿ ಹಾಕಿ ತಲವಾರಿನ ಬೆನ್ನಿನಿಂದ ಬಲ ಕಾಲಿನ ಗಂಟಿಗೆ ಜೋರಾಗಿ ಹೊಡೆದು ನಿನ್ನ ಕಾಲನ್ನು ಇವತ್ತೇ ಮುರಿಯುತ್ತೇನೆ. ಇನ್ನು ಮುಂದಕ್ಕೆ ನೀನು ತೆಂಗಿನ ಕಾಯಿ, ಅಡಿಕೆ ಹೆಕ್ಕಲು ಬರಬಾರದೆಂದು ಹೇಳಿ ಬಿದ್ದಲ್ಲಿಗೆ ಮೂಗಿಗೆ ಅಲ್ಲೇ ಇದ್ದ ಮುಷ್ಠಿ ಗಾತ್ರದ ಕಲ್ಲಿನಿಂದ ಗುದ್ದಿ ಗಾಯ ಮಾಡಿರುತ್ತಾನೆ.
ಘಟನೆಯನ್ನು ನೋಡುತ್ತಿದ್ದ ನೇಮು ನಾಯ್ಕ ಅವರ ಹೆಂಡತಿ ಮತ್ತು ಸೊಸೆಯಂದಿರಾದ ರೂಪ ಮತ್ತು ಸುಧಾ ಅವರುಗಳು ಬರುತ್ತಿರುವುದನ್ನು ಕಂಡು ನೇಮು ನಾಯ್ಕ ಜೋರಾಗಿ ಬೊಬ್ಬೆ ಹೊಡೆಯುತ್ತಿದಾಗ ಆಪಾದಿತ ಉಮೇಶನು ತಲವಾರು ಝಳಪಿಸುತ್ತಾ ಇನ್ನು ಮುಂದೆ ನನ್ನ ಸಹವಾಸಕ್ಕೆ ಬಂದರೆ ಯಾರನ್ನು ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಬಳಿಕ ಗಾಯಾಳು ನೇಮು ನಾಯ್ಕ ಅವರನ್ನು ಮಕ್ಕಳಾದ ದಿನೇಶ್ ಮತ್ತು ರಮೇಶ ಅವರು ಅಟೋ ರಿಕ್ಷಾದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2025 ಕಲಂ 352, 351(2), 109 ಬಿ ಎನ್ ಎಸ್-2023 ರಂತೆ ಪ್ರಕರಣ ದಾಖಲಾಗಿದೆ.

















0 comments:
Post a Comment