ಬಂಟ್ವಾಳ, ಅಕ್ಟೋಬರ್ 25, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘ ಇದರ ವತಿಯಿಂದ ಮಂಚಿ-ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ ಕಲಾನಿಧಿ-25 ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಹಿರಿಯ ಚಿತ್ರಕಲಾವಿದ ಗಣೇಶ್ ಸೋಮಯಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ ತುಕಾರಾಮ ಪೂಜಾರಿ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲೆ ಸಾಹಿತ್ಯ ಸಂಸ್ಕೃತಿ ಮುಂತಾದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಸೃಜನಶೀಲವಾಗಿ ಆಲೋಚಿಸಬೇಕು. ಕವಿ ಕಾಣದ್ದನ್ನು ಕಲಾವಿದ ಕಾಣುತ್ತಾನೆ.. ಚಿತ್ರಕಲೆ ನಾಗರಿಕತೆಯ ಭದ್ರ ಬುನಾದಿ. ನಮ್ಮ ಹಿರಿಯರು ಬಳಸಿದ ವಸ್ತುವಿಗೂ ಸಾಂಸ್ಕೃತಿಕ ಮೌಲ್ಯ ಇದೆ. ಸಾಮಾನ್ಯ ಗೆರಟೆ ಕೂಡಾ ಜನಗಳ ಕಥೆಯನ್ನು ತೆರೆದಿಡುತ್ತದೆ. ಸಾಮಾಜಿಕ ಮೌಲ್ಯ ಇಂದಿಗೂ ಉಳಿದಿರುವುದಾದರೆ ಸೃಜನಶೀಲ ಕಲಾವಿದರ ಕೊಡುಗೆಯಿಂದ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕ ಜಿ ಎಸ್ ಶಶಿಧರ್ ಮಾತನಾಡಿ, ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಕಲಾಕೃತಿ ಮೂಲಕ ತಿಳಿಸಬಹುದು. ಭಾವನೆಗಳನ್ನು ಪ್ರಸ್ತುತಪಡಿಸಲು ಒಂದು ಚಿತ್ರ ಬಹುದೊಡ್ಡ ಮಾಧ್ಯಮ. ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಪ್ರತಿಯೊಬ್ಬರು ಮಗ್ನರಾಗಬೇಕು ಎಂದರು.
ಸಮಾರಂಭದಲ್ಲಿ 2023ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಕಲಾವಿದ ವೆಂಕಿ ಪಲಿಮಾರು, 2024ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ವಿ ಕೆ ವಿಟ್ಲ ಹಾಗೂ 2025ನೇ ಸಾಲಿನ ಕಲಾನಿಧಿ ಪ್ರಶಸ್ತಿಯನ್ನು ಶ್ರೀಮತಿ ರಾಜೇಶ್ವರಿ ಕೆ ಮಂಗಳೂರು ಅವರಿಗೆ ಪ್ರದಾನ ಮಾಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಶೀಲಾ ವಿಟ್ಲ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಶಂಕರ ರಾವ್ ಮಂಚಿ, ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮಿತಿ ಸದಸ್ಯೆ ಮನೋರಂಜಿನಿ ರಾವ್ ಭಾಗವಹಿಸಿದ್ದರು.
ಕಲಾವಿದ ಶಿಕ್ಷಕ ಅರವಿಂದ ಕುಡ್ಲ ಮಕ್ಕಳಿಗೆ ಓರಿಗಾಮಿ ಕಲೆಯ ಬಗ್ಗೆ ತರಬೇತಿ ನೀಡಿದರು. ಗೋಪಾಡ್ಕರ್ ಕ್ರಿಯೇಟಿವ್ ಆರ್ಟ್ ಬಗ್ಗೆ ಮಾಹಿತಿ ನೀಡಿ ವಿದ್ಯಾರ್ಥಿಗಳಿಗೆ ಚಿತ್ರ ರಚನೆಯ ಪಂಥ ನೀಡಿದರು. ವಿಜೇತ ವಿದ್ಯಾರ್ಥಿಗಳಿಗೆ ವಿಭಿನ್ನ ರೀತಿಯ ಪ್ರಶಸ್ತಿಗಳನ್ನು ನೀಡಲಾಯಿತು. ಇದೇ ವೇಳೆ ಪ್ರಶಸ್ತಿ ಪುರಸ್ಕೃತರ ಚಿತ್ರಕಲಾ ಪ್ರದರ್ಶನ ನಡೆಯಿತು.
ಮೋಹನ್ ಕುಮಾರ್ ಪೆರ್ಮುದೆ ಸ್ವಾಗತಿಸಿ, ಕಲಾನಿಧಿ ಗೋಪಾಡ್ಕರ್ ಪ್ರಸ್ತಾವನೆಗೈದರು. ಬಾಲಕೃಷ್ಣ ಶೆಟ್ಟಿ ವಂದಿಸಿದರು. ಕಲಾವಿದ ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.




















0 comments:
Post a Comment