ಮಂಗಳೂರು, ನವೆಂಬರ್ 03, 2025 (ಕರಾವಳಿ ಟೈಮ್ಸ್) : ಅಕ್ರಮ ಗೋಸಾಗಾಟ ಪ್ರಕರಣ ಪತ್ತೆ ಹಚ್ಚಿದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಹಸು ಸಹಿತ, ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಮಲ್ಲೂರು ಗ್ರಾಮದ ಕಂಜಿಲಕೋಡಿ ಎಂಬಲ್ಲಿ ನ 1 ರಂದು ನಡೆದಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೂರು ಗ್ರಾಮದ ಬದ್ರಿಯಾ ನಗರ ಪರಿಸರದಲ್ಲಿ ಶವಾರ ಸುಝುಕಿ ಕಂಪೆನಿಯ ಹಳದಿ ಮತ್ತು ಸಿಲ್ವರ್ ಬಣ್ಣದ ಮಾಡರ್ನ್ ಎಂಬ ಹೆಸರಿನ ಗೂಡ್ಸ್ ವಾಹನದಲ್ಲಿ ಗೋವುಗಳನ್ನು ತುಂಬಿಕೊಂಡು ಮಲ್ಲೂರು ಮಾರ್ಗದಿಂದ ಕಲ್ಪನೆ ಕಡೆಗೆ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಸೈ ಅರುಣ್ ಕುಮಾರ್ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ಮಲ್ಲೂರು ಗ್ರಾಮದ ಕಂಜಿಲಕೋಡಿ ಎಂಬಲ್ಲಿ ಗೂಡ್ಸ್ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದಾಗ ಒಂದು ಕಪ್ಪು ಬಣ್ಣದ ಹಸು ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ವಾಹನ ಚಾಲಕ ಜೋಸೆಫ್ ನಿಲೇಶ್ ಡಿ ಅಲ್ಮೇಡಾ ಮತ್ತು ಕಣ್ಣೂರಿನ ಮಜೀದ್ ಎಂಬವರು ಕಣ್ಣೂರಿನಿಂದ ಕಲಾಯಿ ಕಡೆಗೆ ಯಾವುದೇ ಪರವಾನಿಗೆ ಇಲ್ಲದೇ ಈ ಹಸುವನ್ನು ಸಾಗಿಸುತ್ತಿರುವುದಾಗಿ ತಿಳಿದು ಬಂದಿದೆ. ಆರೋಪಿಗಳ ಸಹಿತ ಹಸು ಹಾಗೂ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಹಸುವನ್ನು ಪೊಲೀಸರು ಗೋಶಾಲೆಗೆ ಹಸ್ತಾಂತರಿಸಿದ್ದಾರೆ.
ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯ ಕ್ರಾಂತಿ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗವಿರಾಜ್, ಪಿಎಸ್ಸೈ ಅರುಣ್ ಕುಮಾರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.













0 comments:
Post a Comment