ಬಂಟ್ವಾಳ, ನವೆಂಬರ್ 20, 2025 (ಕರಾವಳಿ ಟೈಮ್ಸ್) : ಉಡುಪಿಯಿಂದ ಬೆಂಗಳೂರಿಗೆ ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಸ್ಸಿನಲ್ಲಿ ತೆರಳುತ್ತಿದ್ದ ವೇಳೆ ದಾರಿ ಮಧ್ಯೆ ಚಿನ್ನಾಭರಣ ಇದ್ದ ವ್ಯಾನಿಟಿ ಬ್ಯಾಗ್ ಬಸ್ಸಿನ ಸೀಟಿನಲ್ಲಿಟ್ಟು ಮೂತ್ರ ಮಾಡಲು ತೆರಳಿದ್ದ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಬಾಳ್ತಿಲ ಗ್ರಾಮದ ಕುದ್ರಬೆಟ್ಟು ಸಮುದ್ರ ಹೋಟೆಲ್ ಬಳಿ ನ 19 ರಂದು ರಾತ್ರಿ ನಡೆದಿದೆ.
ಈ ಬಗ್ಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಚೇರ್ಕಾಡಿ ಗ್ರಾಮದ ಸೂರೆಬೆಟ್ಟು ಸಿದ್ದಿ ವಿನಾಯಕ ದೇವಸ್ಥಾನದ ಬಳಿ ನಿವಾಸಿ ವಾಸುದೇವ ಸೂರ್ಯ (69) ಅವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಇವರು ತನ್ನ ಪತ್ನಿ ಶ್ರೀಮತಿ ಶಂಕರಿ ಎಂಬವರೊಂದಿಗೆ ಬೆಂಗಳೂರಿನಲ್ಲಿ ತನ್ನ ಸಂಬಂಧಿಕರ ಮದುವೆಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ನವೆಂಬರ್ 19 ರಂದು ತನ್ನ ಮನೆಯಲ್ಲಿದ್ದ ತಲಾ 8 ಗ್ರಾಂ ತೂಕದ 4 ಚಿನ್ನದ ಬಳೆಗಳು, ಸುಮಾರು 24 ಗ್ರಾಂ ತೂಕದ ಚಿನ್ನದ ಕೊತ್ತಂಬರಿ ಸರ, ಸುಮಾರು 16 ಗ್ರಾಂ ತೂಕದ ಚಿನ್ನದ ಮಿಶ್ರಿ ಸರ, ಸುಮಾರು 16 ಗ್ರಾಂ ತೂಕದ ಚಿನ್ನದ ಲಕ್ಮ್ಷೀ ಪದಕವಿರುವ ಹವಳದ ಸರ, ಸುಮಾರು 12 ಗ್ರಾಂ ತೂಕದ ಹಸಿರು ಕಲ್ಲಿನ ಪದಕವಿರುವ ಚಿನ್ನದ ಸರ, ಸುಮಾರು 10 ಗ್ರಾಂ ತೂಕದ ಮುತ್ತಿನ ಸರ, ತಲಾ 2 ಗ್ರಾಂ ತೂಕದ 4 ಚಿನ್ನದ ಉಂಗುರ ಮತ್ತು ತಲಾ 4 ಗ್ರಾಂ ತೂಕದ 4 ಜೊತೆ ಚಿನ್ನದ ಬೆಂಡೋಲೆಗಳನ್ನು ತನ್ನ ಪರ್ಸಿನಲ್ಲಿ ತುಂಬಿಸಿ ಬಟ್ಟೆ ಬರೆ ಇರುವ ವ್ಯಾನಿಟಿ ಬ್ಯಾಗಿನಲ್ಲಿಟ್ಟು ಬ್ರಹ್ಮಾವರದಿಂದ ರಾತ್ರಿ 9 ಗಂಟೆಗೆ ಬೆಂಗಳೂರಿಗೆ ಹೋಗುವ ದುರ್ಗಾಂಬಾ ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ. ರಾತ್ರಿ ಸುಮಾರು 11.15ಕ್ಕೆ ಬಸ್ಸು ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಸಮುದ್ರ ಹೊಟೇಲ್ ಬಳಿ ನಿಂತಿದ್ದು, ಈ ಸಂದರ್ಭ ಇವರ ಪತ್ನಿ ಚಿನ್ನದ ಪರ್ಸ್ ಇರುವ ವ್ಯಾನಿಟಿ ಬ್ಯಾಗನ್ನು ಪತಿಯಲ್ಲಿ ನೀಡಿ ಮೂತ್ರ ವಿಸರ್ಜನೆಗೆ ಬಸ್ಸಿನಿಂದ ಇಳಿದು ಹೋಗಿದ್ದರು. ಸ್ವಲ್ಪ ಸಮಯದ ಬಳಿಕ ವಾಸುದೇವ ಸೂರ್ಯ ಕೂಡಾ ಚಿನ್ನವಿರುವ ವ್ಯಾನಿಟಿ ಬ್ಯಾಗನ್ನು ಸೀಟಿನಲ್ಲಿಟ್ಟು ಮೂತ್ರ ವಿಸರ್ಜನೆಗೆ ಬಸ್ಸಿನಿಂದ ಇಳಿದು ಹೋಗಿದ್ದಾರೆ. ವಾಪಾಸು 11.20 ರ ವೇಳೆಗೆ ಬಸ್ಸಿನೊಳಗೆ ಬಂದು ತಾವು ಕುಳಿತಿದ್ದ ಸೀಟಿನಲ್ಲಿ ನೋಡಿದಾಗ ಚಿನ್ನಾಭರಣ ಇಟ್ಟಿದ್ದ ಪರ್ಸ್ ಸೀಟಿನಲ್ಲಿ ಬಿದ್ದುಕೊಂಡಿದ್ದು, ಪರ್ಸಿನಲ್ಲಿದ್ದ ಚಿನ್ನಾಭರಣಗಳು ಕಂಡು ಬಂದಿರುವುದಿಲ್ಲ. ಯಾರೋ ಕಳ್ಳರು ಬಸ್ಸಿನೊಳಗೆ ಬಂದು ಪರ್ಸಿನಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರ್ಸನ್ನು ಅಲ್ಲೇ ಬಿಟ್ಟು ಹೋಗಿರುತ್ತಾರೆ. ಕಳವಾದ ಒಟ್ಟು 134 ಗ್ರಾಂ ಚಿನ್ನಾಭರಣಗಳ ಮೌಲ್ಯ 14 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment