ಮೊಬೈಲ್ ಗೀಳು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಚಾಮರಾಜೇಂದ್ರ ಕರೆ - Karavali Times ಮೊಬೈಲ್ ಗೀಳು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಚಾಮರಾಜೇಂದ್ರ ಕರೆ - Karavali Times

728x90

17 November 2025

ಮೊಬೈಲ್ ಗೀಳು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಚಾಮರಾಜೇಂದ್ರ ಕರೆ

ಮಂಗಳೂರು, ನವೆಂಬರ್ 17, 2025 (ಕರಾವಳಿ ಟೈಮ್ಸ್) : ಇಂದಿನ ಕಾಲಘಟ್ಟದ ಯುವ ಜನತೆ ಮೊಬೈಲ್ ಸಾಮಾಜಿಕ ಜಾಲತಾಣದತ್ತ ಅತಿಯಾದ ಒಲವು ತೋರಿಸುತ್ತಿದ್ದು, ಗ್ರಂಥಗಳನ್ನು ಓದುವ ಹವ್ಯಾಸದಿಂದ ಹೊರಗುಳಿಯುತ್ತಿದ್ದಾರೆ. ಯುವಜನರು ಮೊಬೈಲ್ ಬಳಕೆ ಕಡಿಮೆಗೊಳಿಸಿ ದಿನದ 2-3 ಗಂಟೆ ಗ್ರಂಥಾಲಯದ ಪುಸ್ತಕ ಓದುವ ಅಭಿರುಚಿ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಚಾಮರಾಜೇಂದ್ರ ಎಚ್ ಹೇಳಿದರು. 

ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನ 17 ರಂದು ನಡೆದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025 ರ ಪ್ರಯುಕ್ತ ಜ್ಞಾನ ಸಂಗಮ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಗಳನ್ನು ಓದಿ  ವಿಭಿನ್ನ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಜ್ಞಾನ ಮಾರ್ಗದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಗ್ರಂಥಗಳು ನಮ್ಮ ವ್ಯಕ್ತಿತ್ವ  ರೂಪಿಸಲು ಸಹಕಾರಿಯಾಗುತ್ತದೆ ಎಂದರು. 

ಉಪನ್ಯಾಸ ನೀಡಿದ ಬಾರ್ಕೂರು ದಾಮೋದರ ಶರ್ಮ ಮಾತನಾಡಿ, ಗ್ರಂಥಗಳು ಯುವ ಜನತೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸುವ ಸಾಧನವಾಗಿದೆ. ವಿದ್ಯಾರ್ಥಿಗಳು ಪಾಠ ಪುಸ್ತಕಗಳ ಜೊತೆಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಗ್ರಂಥಾಲಯಗಳಲ್ಲಿರುವ ಅನೇಕ ಸಾಧಕರ ಬದುಕಿನ ಕಥೆಗಳನ್ನು ಸಾರುವ, ಉತ್ತಮ ಸಂದೇಶಗಳನ್ನು ನೀಡುವ ಪುಸ್ತಕಗಳನ್ನು ಓದಿಕೊಂಡು, ಯೋಗ್ಯವಾದ ಯೋಚನೆಯೊಂದಿಗೆ ಬದುಕಿನಲ್ಲಿ ಹೆಜ್ಜೆಗಳನ್ನಿಡಬೇಕು ಎಂದರು. 

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಜಯಕರ ಭಂಡಾರಿ, ನಗರ ಕೇಂದ್ರ ಗ್ರಂಥಾಲಯ  ಉಪನಿರ್ದೇಶಕಿ ಗಾಯತ್ರಿ, ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಮಮತಾ ಮೊದಲಾದವರು ಭಾಗವಹಿಸಿದ್ದರು. 

ಇದೇ ವೇಳೆ ಸಿಬ್ಬಂದಿ ಸೇವಾ ಪುರಸ್ಕಾರ ಹಾಗೂ ಉತ್ತಮ ಓದುಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾರ್ವತಿ ಎಂ ವಂದಿಸಿ, ಗ್ರಂಥಪಾಲಕಿ ಪ್ರಣಿತ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಮೊಬೈಲ್ ಗೀಳು ಕಡಿಮೆ ಮಾಡಿ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ : ಚಾಮರಾಜೇಂದ್ರ ಕರೆ Rating: 5 Reviewed By: karavali Times
Scroll to Top