ತುಂಬೆ ವಿದ್ಯಾ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ
ಬಂಟ್ವಾಳ, ಡಿಸೆಂಬರ್ 03, 2025 (ಕರಾವಳಿ ಟೈಮ್ಸ್) : ತುಂಬೆಯಂತಹ ಗ್ರಾಮೀಣ ಪ್ರದೇಶದಲ್ಲಿ ಒಂದು ಶಿಸ್ತು ಬದ್ಧವಾದ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಹಮ್ಮದ್ ಹಾಜಿ ಮೊಹಿಯುದ್ದೀನ್ ಅವರದು ದೊಡ್ಡ ಸಾಧನೆಯೇ ಸರಿ. ಕಳೆದ 3-4 ದಶಕಗಳ ಪಾಠ-ಪಾಠೇತರ ಪ್ರಗತಿಯನ್ನು ಕಾಣುವಲ್ಲಿ ಅವರಿಗೆ ಇದ್ದ ದೂರದರ್ಶಿತ್ವ ನಿಜಕ್ಕೂ ಪ್ರಶಂಸನೀಯವಾದುದು ಎಂದು ಮೆಸ್ಕಾಂ ಅಧ್ಯಕ್ಷ ಕೆ ಹರೀಶ್ ಕುಮಾರ್ ಹೇಳಿದರು.
ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಇದರ ಅಧೀನದ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನ 37ನೇ ವರ್ಷದ ವಾರ್ಷಿಕ ಕ್ರೀಡಾಕೂಟ-2025 ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ ಎನ್ನುವುದು ಕಲಿಕೆಯ ಒಂದು ಭಾಗವಾಗಿದೆ. ನೂರಾರು, ಸಾವಿರಾರು ಮಂದಿಗಳ ನಡುವೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲುವು ಸಾಧಿಸುವುದು ಮಹತ್ವದ ವಿಷಯವೇ ಸರಿ.ಆದರೆ ವಿದ್ಯಾರ್ಥಿ ಜೀವನದಲ್ಲಿ ಸೋತರೆ ಕುಗ್ಗದೆ, ಗೆದ್ದರೆ ಗರ್ವ ಪಡದೆ ಸಮತೋಲನದಲ್ಲಿ ಮುಂದುವರಿಯಬೇಕು. ಅದು ಭವಿಷ್ಯದ ಜೀವನಕ್ಕೆ ದಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಬಿ ಅಬ್ದುಲ್ ಸಲಾಂ ಮಾತನಾಡಿ, ವಿದ್ಯಾರ್ಥಿಗಳು ಪಾಠ ಮತ್ತು ಪಾಠೇತರ ಚಟುವಟಿಕೆಗಳೆರಡಕ್ಕೂ ಪ್ರಾಧಾನ್ಯತೆ ಕೊಡಬೇಕು. ಅಂತಹ ಪ್ರವೃತ್ತಿ ಉಳ್ಳವರು ಮುಂದೆ ಯಶಸ್ಸು ಗಳಿಸುತ್ತಾರೆ. ಸಿಗುವ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾ ಯಶಸ್ಸಿನ ಗುರಿಯತ್ತ ಮುಖ ಮಾಡಿ ಸಾಗುತ್ತಿರಿ ಎಂದರು.
ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ಪಟು ಮಹಮ್ಮದ್ ಅಯಾನ್ ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದರು. ಕ್ರೀಡಾ ಕಾರ್ಯದರ್ಶಿ ವಾಸುಕಿ ಅಭಯ ಶರ್ಮ ಪ್ರತಿಜ್ಞಾ ವಿಧಿ ಬೋಧಿಸಿದರು.
ತುಂಬೆ ವಿದ್ಯಾ ಸಂಸ್ಥೆಯ ಪಿಟಿಎ ಅಧ್ಯಕ್ಷ ನಿಸಾರ್ ಅಹಮ್ಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಕೆ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಮ್ಯಾಕ್ಸಿಂ ಕುವೆಲ್ಲೋ, ಶಾಫಿ ಅಮ್ಮೆಮ್ಮಾರ್, ಚಂಚಲಾಕ್ಷಿ, ತುಂಬೆ ವಿದ್ಯಾ ಸಂಸ್ಥೆಯ ಪಿಟಿಎ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಸುವರ್ಣ, ತುಂಬೆ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯರಾದ ವಿದ್ಯಾ ಕೆ ಹಾಗೂ ಮಲ್ಲಿಕಾ ಶೆಟ್ಟಿ, ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್, ಆಡಳಿತಾಧಿಕಾರಿ ಕಿಶೋರ್ ಸುವರ್ಣ, ದೈಹಿಕ ಶಿಕ್ಷಣ ನಿರ್ದೇಶಕ ಸಾಯಿರಾಂ ಜೆ ನಾಯಕ್, ದೈಹಿಕ ಶಿಕ್ಷಣ ಶಿಕ್ಷಕಿ ಮೋಲಿ ಎಡ್ನಾ ಮೊದಲಾದವರು ಭಾಗವಹಿಸಿದ್ದರು.
ಪಿಯು ಕಾಲೇಜು ಪ್ರಾಂಶುಪಾಲ ವಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಬಿ ಜಗದೀಶ್ ರೈ ವಂದಿಸಿದರು. ಉಪನ್ಯಾಸಕ ದಿನೇಶ್ ಶೆಟ್ಟಿ ಎಂ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ವಿ.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಬಿ ಜಗದೀಶ್ ರೈ ವಂದಿಸಿದರು. ತುಂಬೆ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ದಿನೇಶ ಶೆಟ್ಟಿ ಎಂ ಕಾರ್ಯಕ್ರಮ ನಿರೂಪಿಸಿದರು.













0 comments:
Post a Comment