ಬಂಟ್ವಾಳ, ಡಿಸೆಂಬರ್ 03, 2025 (ಕರಾವಳಿ ಟೈಮ್ಸ್) : ಕುಕ್ಕಿಪ್ಪಾಡಿ ಗ್ರಾಮದ ಕೊಲೆಜಾಲು ಎಂಬಲ್ಲಿ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ಕಳವುಗೈದ ಘಟನೆ ಮಂಗಳವಾರ ಹಾಡಹಗಲೇ ನಡೆದಿದೆ.
ಇಲ್ಲಿನ ನಿವಾಸಿ ವಿಲಿಯಂ ವಾಸ್ ಎಂಬವರ ಪತ್ನಿ ಶ್ರೀಮತಿ ಪ್ರೆಸಿಲ್ಲ ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಮಂಗಳವಾರ ಬೆಳಿಗ್ಗೆ ತನ್ನ ಮಗನನ್ನು ಸಿದ್ದಕಟ್ಟೆ ಶಾಲೆಗೆ ಬಿಟ್ಟು ಬಳಿಕ 10 ಗಂಟೆಗೆ ಸಿದ್ದಕಟ್ಟೆಗೆ ಟೈಲರಿಂಗ್ ಕೆಲಸದ ನಿಮಿತ್ತ ಮನೆಯ ಮುಂಬಾಗಿಲನ್ನು ಒಳಗಿನಿಂದ ಲಾಕ್ ಮಾಡಿ ಭದ್ರಪಡಿಸಿ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ತೆರಳಿದ್ದಾರೆ.
ಮದ್ಯಾಹ್ನ ಸುಮಾರು 2:15 ಗಂಟೆಗೆ ಕೆಲಸ ಮುಗಿಸಿ ಊಟಕ್ಕೆಂದು ಮನೆಗೆ ಬಂದು ಹಿಂಬಾಗಿಲನ್ನು ತೆರೆದು ಒಳ ಬಂದು ಮುಂಬಾಗಿಲ ಲಾಕ್ ತೆರೆಯುವರೇ ನೋಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಯಾರೋ ಕಳ್ಳರು ಮನೆಯ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ ಮನೆಯ ಒಳಗಿನ ಕೋಣೆಯ ಎರಡೂ ರೂಮಿನ ಗೋದ್ರೇಜುಗಳನ್ನು ತೆರೆದು ಒಳಗೆ ಕಪಾಟನ್ನು ತೆರೆದು ಗೋದ್ರೇಜಿನ ಬಟ್ಟೆ ಬರೆಗಳನ್ನು ಹಾಗೂ ಸೊತ್ತುಗಳನ್ನು ಚೆಲ್ಲಾಪಿಲ್ಲಿಯಾಗಿಸಿದ್ದಲ್ಲದೆ ಮನೆಯ ಡೈನಿಂಗ್ ಹಾಲಿನ ಎದುರು ಬಾಗದ ಮುಂಬಾಗದ ಬೆಡ್ ರೂಮಿನಲ್ಲಿದ್ದ ಗೋದ್ರೇಜಿನ ಬಾಗಿಲು ಮೀಟಿ ಸೇಫ್ಟಿ ಲಾಕರನ್ನು ಮುರಿದು ಅದರಲ್ಲಿ ಪ್ಲಾಸ್ಟಿಕ್ ಬಾಕ್ಸ್ ನಲ್ಲಿಟ್ಟಿದ್ದ 2 ಲಕ್ಷ ರೂಪಾಯಿ ನಗದು, 40 ಸಾವಿರ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಮಗನ ಪ್ಲೈನ್ ಚಿನ್ನದ ಸರ, 30 ಸಾವಿರ ರೂಪಾಯಿ ಮೌಲ್ಯದ 6 ಗ್ರಾಂ ತೂಕದ ಮಗನ ಹಳೆಯ ಚಿನ್ನದ ಪ್ಲೈನ್ ಸರ, 30 ಸಾವಿರ ರೂಪಾಯಿ ಮೌಲ್ಯದ 5 ಗ್ರಾಂ ತೂಕದ ಮಗನ ಚಿನ್ನದ ಬ್ರಾಸ್ ಲೈಟ್ ಸಹಿತ ಒಟ್ಟು ಸುಮಾರು 1 ಲಕ್ಷ ರೂಪಾಯಿ ಮೌಲ್ಯದ 17 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂಪಾಯಿ ನಗದು ಹಣ ಸೇರಿ ಒಟ್ಟು 3 ಲಕ್ಷ ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವುಗೈದಿದ್ದಾರೆ. ಈ ಬಗ್ಗೆ ಪ್ರೆಸಿಲ್ಲ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














0 comments:
Post a Comment