ಮಂಗಳೂರು, ಜನವರಿ 02, 2026 (ಕರಾವಳಿ ಟೈಮ್ಸ್) : ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗರಗುಡ್ಡೆ ಎಂಬಲ್ಲಿ ಜಾನುವಾರು ಮಾಲಕ ವ್ಯಕ್ತಿಯ ಬಳಿ ಬಂದ ಮೂವರು ವ್ಯಕ್ತಿಗಳು ಬಲಾತ್ಕಾರವಾಗಿ ಸುಲಿಗೆಗೆ ಯತ್ನಿಸಿದ ಘಟನೆ ಸಂಭವಿಸಿದೆ.
ಇಲ್ಲಿನ ನಿವಾಸಿ ಅಬೂಬಕ್ಕರ್ ಎಂಬವರ ಮನೆ ಸಮೀಪಕ್ಕೆ ಬಂದ ಪಕ್ಕದ ಗ್ರಾಮದ ಮೂವರು ವ್ಯಕ್ತಿಗಳು ಹಣಕ್ಕಾಗಿ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಅಬೂಬಕ್ಕರ್ ಅವರ ಬಳಿ 3 ಜೋಡಿ ಎಮ್ಮೆಗಳು, 5 ಹಾಲು ಹಸುಗಳು ಮತ್ತು ಕೆಲವು ಕೋಣಗಳಿವೆ. ಅವರ ಕೋಣಗಳು ಇತ್ತೀಚೆಗೆ ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದುಕೊಂಡಿದೆ. ಇವರ ಮನೆಗೆ ಬಂದ ದುಷ್ಕರ್ಮಿಗಳು ಅಬೂಬಕ್ಕರ್ ಅವರ ತಂದೆ ಶಂಶುದ್ದೀನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂದರ್ಭ ಮಧ್ಯಪ್ರವೇಶಿಸಿದ ಅಬೂಬಕ್ಕರ್ ತಂದೆಗೆ ರಕ್ಷಣೆ ನೀಡಿದ್ದಾರೆ.
ಇಲ್ಲಿನ ಗ್ರಾಮದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಶಾಂತಿಯುತವಾಗಿ ಜೊತೆಯಾಗಿ ವಾಸಿಸುತ್ತಿದ್ದು, ಅಬೂಬಕ್ಕರ್ ಕುಟುಂಬದ ಸಹಾಯಕ್ಕೆ ಸ್ಥಳೀಯ ಹಿಂದೂಗಳು ಜೊತೆಯಾಗಿದ್ದಾರೆ. ಹಿಂದುಗಳು ಅಬೂಬಕ್ಕರ್ ಜೊತೆ ಪೊಲೀಸ್ ಠಾಣೆಗೂ ಬಂದು ದೂರು ನೀಡಲು ಸಹಕರಿಸಿದ್ದಾರೆ.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಮತ್ತೋರ್ವ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಪೈಕಿ ಒಬ್ಬಾತ ಆಸ್ಪತ್ರೆಗೆ ದಾಖಲಾಗಿ ಸಂತ್ರಸ್ತ ಎಂದು ಬಿಂಬಿಸಲು ಹೊರಟಿದ್ದಾನೆ. ಆದರೆ ಸ್ಥಳೀಯರು ಘಟನೆಯ ವೀಡಿಯೋ ಚಿತ್ರೀಕರಣ ಮಾಡಿದ್ದರಿಂದ ಪೊಲೀಸರು ಸತ್ಯಾಂಶ ತಿಳಿದುಕೊಂಡಿದ್ದಾರೆ.
ಘಟನೆಯ ವೀಡಿಯೋ ಕ್ಲಿಪ್ ಗಳನ್ನು ನೋಡಿ ಪ್ರಕರಣದ ಬಗ್ಗೆ ಸತ್ಯಾಂಶ ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಆರೋಪಿಗಳ ಪೈಕಿ ಇಬ್ಬರ ವಿರುದ್ಧ ಈ ಹಿಂದೆ ಗಂಭೀರ ಪ್ರಕರಣಗಳಿವೆ, ಈ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.



















0 comments:
Post a Comment