ಹೊಸ ವರ್ಷಾಚರಣೆ ಸಂದರ್ಭ ವಿಶೇಷ ಕಾರ್ಯಾಚರಣೆಯಲ್ಲಿ 25 ಮಂದಿ ವಿದ್ಯಾರ್ಥಿಗಳ ಸಹಿತ 52 ಮಂದಿ ಮಾದಕ ವ್ಯಸನಿಗಳ ವಿರುದ್ದ ಕ್ರಮ
ಮಂಗಳೂರು, ಜನವರಿ 02, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರದಾದ್ಯಂತ ಹೊಸ ವರ್ಷಾಚರಣೆ ಸಂದರ್ಭ ನಾಗರಿಕರಿಗೆ ರಕ್ಷಣೆ ನೀಡುವ ಹಾಗೂ ಮಾದಕ ದ್ರವ್ಯ ಮುಕ್ತ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ನಗರ ಪೊಲೀಸರು ವಿವಿಧೆಡೆ ಕಾರ್ಯಾಚರಣೆ ನಡೆಸಿ ಸುಮಾರು ಒಂದು ಸಾವಿರ ಮಂದಿ ಶಂಕಿತ ವ್ಯಕ್ತಿಗಳ ತಪಾಸಣೆ ನಡೆಸಿದ್ದು, 52 ವ್ಯಕ್ತಿಗಳು ಮಾದಕ ದ್ರವ್ಯ ಸೇವನೆ ಮಾಡಿರುವ ಬಗ್ಗೆ ಪಾಸಿಟಿವ್ ದೊರೆತಿದೆ. ಈ ಪೈಕಿ 25 ಮಂದಿ ವಿದ್ಯಾರ್ಥಿಗಳು (ಇಬ್ಬರು ಸ್ಥಳೀಯರು ಮತ್ತು 23 ಮಂದಿ ಹೊರ ಜಿಲ್ಲೆಯವರು), 27 ಮಂದಿ ಸಾರ್ವಜನಿಕರಲ್ಲಿ 17 ಮಂದಿ ಕಾರ್ಮಿಕರು ಹಾಗೂ 10 ಮಂದಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಈ ಎಲ್ಲಾ ಮಂದಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ನಗರ ಪೆÇಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮಾದಕ ದ್ರವ್ಯ ಮಾರಾಟಗಾರರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. 50 ಗ್ರಾಂಗೂ ಹೆಚ್ಚು ಎಂಡಿಎಂಎ ಜೊತೆ ಓರ್ವನನ್ನು ಬಂಧಿಸಲಾಗಿದೆ, ಮತ್ತು
ಇಬ್ಬರು ಆರೋಪಿಗಳಿಂದ 200 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಮೂವರು ಆರೋಪಿಗಳು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದ್ದು, ಇವರ ಬಗ್ಗೆ ಪೊಲೀಸರು ನಿಗಾ ವಹಿಸಿದ್ದಾರೆ. ಇವರ ಬಂಧನ ಮೂಲಕ ಇವರ ಹಿಂದಿರುವ ಜಾಲಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಮಂಗಳೂರು ನಗರ ಪೆÇಲೀಸರು ಯುವಕರನ್ನು ಹಾಗೂ ಜನರನ್ನು ರಕ್ಷಿಸಲು ಮತ್ತು ನಗರದಲ್ಲಿ ಹಬ್ಬ ಆಚರಣೆಗಳು ಸಂತೋಷದಾಯಕ, ಸುರಕ್ಷಿತ ಮತ್ತು ಮಾದಕ ದ್ರವ್ಯ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧರಾಗಿದ್ದಾರೆ. ಮಂಗಳೂರಿನಲ್ಲಿ ಜವಾಬ್ದಾರಿಯುತ ನಾಗರಿಕ ಸಮಾಜ ಮತ್ತು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಪೊಲೀಸರು ನಡೆಸುವ ಕಾರ್ಯಾಚರಣೆಗಳು ಮಂಗಳೂರು ನಗರವನ್ನು ಮಾದಕ ದ್ರವ್ಯ ಮುಕ್ತ ನಗರವಾಗಿ ಪರಿವರ್ತಿಸಬಹುದು ಎಂಬ ವಿಶ್ವಾಸ ಇದೆ ಎಂದು ಇದೇ ವೇಳೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.



















0 comments:
Post a Comment