ಬಂಟ್ವಾಳ, ಫೆಬ್ರವರಿ 26, 2026 (ಕರಾವಳಿ ಟೈಮ್ಸ್) : ಹಲವು ವಿಶೇಷತೆಗಳನ್ನು ಮೈಗೂಡಿಸಿಕೊಂಡು ಸರ್ವಧರ್ಮ ಸಮ್ಮೇಳನದಂತೆ ಆಯೋಜಿಸಿಕೊಂಡು ಬರಲಾಗುತ್ತಿರುವ 15ನೇ ವರ್ಷದ ಮೂಡೂರು-ಪಡೂರು ಜೋಡುಕರೆ ‘ಬಂಟ್ವಾಳ ಕಂಬಳೋತ್ಸವ’ವು ಈ ಬಾರಿ ಮಾರ್ಚ್ 7 ಹಾಗೂ 8 ರಂದು ನಾವೂರು-ಕೂಡಿಬೈಲಿನಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಫೆ 26 ರಂದು ಬಿ ಸಿ ರೋಡಿನಲ್ಲಿ ಕಂಬಳೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವೈಟ್ ಹೆಲೋಜಿನ್ ಲೈಟ್ ಮೊದಲು ಅಳವಡಿಕೆ ಆರಂಭವಾಗಿದ್ದು ಮೂಡೂರು-ಪಡೂರು ಕಂಬಳದಲ್ಲಿ. ಸಿನಿಮಾ ನಟರು ಮೊದಲು ಪ್ರವೇಶ ಮಾಡಿದ್ದೂ ಇಲ್ಲೆ. ಮಹಿಳೆಯರ ಭಾಗವಹಿಸುವಿಕೆ ಆರಂಭವಾಗಿದ್ದೂ ಇದೇ ಮೂಡೂರು-ಪಡೂರು ಕಂಬಳದಲ್ಲಿ. ಈ ರೀತಿಯ ಹಲವು ವಿಶೇಷತೆಗಳನ್ನು ಒಳಗೊಂಡು ಸಾಗಿ ಬಂದಿರುವ ಬಂಟ್ವಾಳ ನಮ್ಮ ಕಂಬಳೋತ್ಸವದಲ್ಲಿ ಈ ಬಾರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭಾ ಸ್ಪೀಕರ್ ಡಾ ಯು ಟಿ ಖಾದರ್, ಸಚಿವರುಗಳಾದ ಡಾ ಜಿ ಪರಮೇಶ್ವರ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಈ ಬಾರಿ ಕಂಬಳ ಗದ್ದೆಯಲ್ಲಿ ಬೃಹತ್ ಗಾತ್ರದ ಶಾಶ್ವತ ವೇದಿಕೆ ನಿರ್ಮಿಸಲಾಗುತ್ತಿದೆ. ಶಾಶ್ವತ ಫ್ಯಾನ್ ಅಳವಡಿಸಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಕಂಬಳ ಸ್ಥಳಕ್ಕೆ ಬರಲು ಮತ್ತೆರದು ಪರ್ಯಾಯ ರಸ್ತೆಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಕಂಬಳೋತ್ಸವಕ್ಕೆ ಸಹಕಾರ ನೀಡುವ ನಿಟ್ಟಿನಲ್ಲಿ ಪರಿಸರವಾಸಿಗಳ ಕಂಬಳಕ್ಕೆ ಮುಂಚಿತವಾಗಿ ಗದ್ದೆಗಳ ಬೆಳೆಗಳನ್ನು ಕೊಯ್ಲು ಮಾಡುವ ಮೂಲಕ ಪೂರ್ಣ ಸಹಕಾರ ನೀಡಲಿದ್ದಾರೆ. ಈ ಬಾರಿ ವಿಶೇಷವಾಗಿ ಕಂಬಳದ ಮೆರುಗನ್ನು ಹೆಚ್ಚಿಸುವ ನಿಟ್ಟಿನಲ್ಲಿ ಆಹಾರ ಮೇಳ ಆಯೋಜಿಸಲಾಗುತ್ತಿದ್ದು, ಎಲ್ಲ ರೀತಿಯಲ್ಲೂ ಜಿಲ್ಲೆಯ ನಂಬರ್ ಒನ್ ಸ್ಥಾನದಲ್ಲಿರುವ ಮೂಡೂರು ಪಡೂರು ಕಂಬಳ ಸರ್ವ ಜನಾಂಗಕ್ಕೆ ಸೇರಿದ ಜನರ ಹಬ್ಬದ ರೀತಿ ಆಯೋಜಿಸಲಾಗುದು ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಲೂರು ಕರ್ನಾಟಕ ಆರ್ಯ-ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಸ್ಪತಿ ಡಾ ಸಂತೋಷ್ ಗುರೂಜಿ, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ರಾಬರ್ಟ್ ಡಿಸೋಜ, ಆಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ್ ಅಜಿಲ ಸಹಿತ ಹಲವು ಗಣ್ಯರು ಭಾಗವಹಿಸುವರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಮೂಡೂರು-ಪಡೂರು ಬಂಟ್ವಾಳ ಕಂಬಳೋತ್ಸವವು ಸಮಾಜದ ಎಲ್ಲ ವರ್ಗದ ಕೂಡುವಿಕೆಯ ಕಂಬಳವಾಗಿದ್ದು, ಸರ್ವರಿಗೂ ಪ್ರೀತಿಯ ಆಮಂತ್ರಣ ಎಂದರು.
ಈ ಸಂದರ್ಭ ಕಂಬಳ ಸಮಿತಿ ಸಂಚಾಲಕ ಬಿ ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಕಾರ್ಯದರ್ಶಿ ರಾಜೀವ್ ಶೆಟ್ಟಿ ಎಡ್ತೂರು, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ಉಪಾಧ್ಯಕ್ಷರುಗಳಾದ ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಸುದರ್ಶನ್ ಜೈನ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಅವಿಲ್ ಮೆನೇಜಸ್, ಪ್ರಮುಖರಾದ ರಾಜೇಶ್ ರೋಡ್ರಿಗಸ್, ಸುರೇಶ್ ಜೋರಾ, ಇಬ್ರಾಹಿಂ ನವಾಝ್, ಉಮೇಶ್ ಬೋಳಂತೂರು, ಎ ಬಿ ಅಬ್ದುಲ್ಲ, ಲಾದ್ರು ಮೆನೇಜಸ್, ಪ್ರವೀಣ್ ರೋಡ್ರಿಗಸ್, ಬಾಲಕೃಷ್ಣ ಆಳ್ವ ಕೊಡಾಜೆ, ಶಬೀರ್ ಎಸ್, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಡೆಂಝಿಲ್, ಫ್ಲೆಕ್ಸಿ ಅಲ್ತಾಫ್, ಮೋಹನ್ ಚೆಂಡ್ತಿಮಾರ್, ಆಲ್ಬರ್ಟ್ ಮೆನೇಜಸ್ ಮೊದಲಾದವರು ಜೊತೆಗಿದ್ದರು.














0 comments:
Post a Comment