ಬಂಟ್ವಾಳ, ಫೆಬ್ರವರಿ 19, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಪ್ಲಾಝಾ ತೆರವಿಗೆ ಹೋರಾಟ ರೂಪಿಸಲು ಬಂಟ್ವಾಳ ತಾಲೂಕಿನ ಸಮಾನ ಮನಸ್ಕ ಸಂಘಟನೆಗಳು ಹಾಗೂ ಟೋಲ್ ವಿರೋಧಿ ಹೋರಾಟಗಾರರು ಫೆ 19 ರಂದು ಬಿ ಸಿ ರೋಡಿನಲ್ಲಿ ಸಮಾಲೋಚನಾ ಸಭೆ ನಡೆಸಿದೆ.
ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾನ ಮನಸ್ಕ ವಿವಿಧ ಸಂಘಟನೆಗಳು, ಪಕ್ಷಗಳಿಗೆ ಸೇರಿದ ಪ್ರತಿನಿಧಿಗಳು ಭಾಗವಹಿಸಿದ್ದರು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಟೋಲ್ ಗೇಟ್ ತೆರವಿಗೆ ನಡೆಸಬೇಕಾದ ಮುಂದಿನ ಹೋರಾಟಗಳ ಕುರಿತು ವಿವರಿಸಿದರು.
ಇದೇ ವೇಳೆ “ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ, ಬಂಟ್ವಾಳ” ರಚಿಸಿ ಆ ಮೂಲಕ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಅವಿರತ ಹೋರಾಟ ನಡೆಸಲು ನಿರ್ಧರಿಸಲಾಯಿತು.
ಹೋರಾಟ ಸಮಿತಿಗೆ ಬಿ ರಮಾನಾಥ ರೈ ಅವರನ್ನು ಗೌರವಾಧ್ಯಕ್ಷರಾಗಿ, ಬಿ ಶೇಖರ್ ಹಾಗೂ ಮೋಹನ್ ಶೆಟ್ಟಿ ಅವರನ್ನು ಸಂಚಾಲಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಮುಂದಿನ ದಿನದಲ್ಲಿ ಸಮಾನ ಮನಸ್ಕರಾದ ಎಲ್ಲರನ್ನೊಳಗೊಂಡ ಸಮಾವೇಶ ನಡೆಸಿ ಪೂರ್ಣ ಪ್ರಮಾಣದ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನೂತನ ಸಮಿತಿ ವತಿಯಿಂದ, ಸಮಾನ ಮನಸ್ಕ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3 ರಂದು ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರಗೆ ಬೃಹತ್ ಸಾಮೂಹಿಕ ಧರಣಿ ನಡೆಸುವುದಾಗಿ ಸಭೆಯಲ್ಲಿ ತೀರ್ಮಾನಿಸಿತು. ಮುಂದಿನ ಹಂತದಲ್ಲಿ ಮತ್ತಷ್ಟು ತೀವ್ರತರವಾದ ಹೋರಾಟ ಸಂಘಟಿಸುವುದು, ಟೋಲ್ ಗೇಟ್ ತೆರವುಗೊಳಿಸಿಯೇ ವಿಶ್ರಮಿಸುವುದು ಎಂದು ಸಭೆ ಘೋಷಿಸಿತು.













0 comments:
Post a Comment