ಬಂಟ್ವಾಳ, ಫೆಬ್ರವರಿ 24, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಕೆಲವೊಂದು ಜನವಸತಿ ಹಾಗೂ ಜನೋಪಯೋಗಿ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳು ವಾಹನ ತಿರುವು ಪಡೆಯಲು ಕಿಲೋ ಮೀಟರುಗಟ್ಟಲೆ ಕ್ರಮಿಸಬೇಕಾದ ಅವಸ್ಥೆ ಎದುರಾಗಿದೆ. ಮೆಲ್ಕಾರ್ ಸಮೀಪದ ಬೋಳಂಗಡಿ ಪ್ರದೇಶದಲ್ಲಿ ಸರಕಾರಿ, ಖಾಸಗಿ ಶಾಲೆಗಳು, ಮಸೀದಿ, ಅಂಗನವಾಡಿ ಸಹಿತ ಹಲವಾರು ವಾಸ್ತವ್ಯದ ಮನೆಗಳಿದ್ದು, ಇಲ್ಲಿನ ಸಾರ್ವಜನಿಕರು ಶಾಲೆ, ಅಂಗನವಾಡಿ, ಮಸೀದಿಗೆ ತೆರಳುವವರು ಹಾಗೂ ಸ್ಥಳೀಯ ನಿವಾಸಿಗಳು ತಮ್ಮ ಮನೆಗಳಿಗೆ ತೆರಳುವರೇ ಒಂದೆರಡು ಕಿಲೋ ಮೀಟರ್ ಕ್ರಮಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿನ ನಿವಾಸಿಗಳು ತಿರುವು ಪಡೆಯಬೇಕಾದರೆ ಒಂದು ಬದಿಯಲ್ಲಿ ಕೆ ಸಿ ರೋಡು ಜಂಕ್ಷನ್ನಿಗೆ ಬರಬೇಕು ಅಥವಾ ಇನ್ನೊಂದು ಕಡೆಯಲ್ಲಿ ಮೆಲ್ಕಾರ್ ಜಂಕ್ಷನ್ನಿಗೆ ಬರಬೇಕಾದ ದುಸ್ಥಿತಿ ಇದೆ.
ಹೆದ್ದಾರಿ ಮಧ್ಯೆ ತಿರುವು ಪಡೆಯುವ ಅವಕಾಶ ಇಲ್ಲದೆ ಇರುವುದರಿಂದ ಅಗತ್ಯ ಕಾರ್ಯಗಳಿಗಾಗಿ ಜನ ಸಂಚರಿಸಬೇಕಾದರೆ ದುಬಾರಿ ವೆಚ್ಚ ಭರಿಸಬೇಕಾದ ಸ್ಥಿತಿ ಇದೆ. ಇನ್ನು ಸ್ಥಳೀಯರು ಬಸ್ಸುಗಳನ್ನು ಆಶ್ರಯಿಸಲೂ ಕೂಡಾ ಒಂದು ಬದಿಯಿಂದ ಇನ್ನೊಂದು ಬದಿಗೆ ಹೆದ್ದಾರಿ ದಾಟಲೂ ಸಾಧ್ಯವಾಗದ ಪರಿಸ್ಥಿತಿ ಇದೆ. ಹೆದ್ದಾರಿ ದಾಟುವ ವ್ಯವಸ್ಥೆಯೂ ಇಲ್ಲಿ ಇಲ್ಲದೆ ಇರುವುದರಿಂದ ವಯೋವೃದ್ದರು, ಅಶಕ್ತರು, ಅನಾರೋಗ್ಯ ಪೀಡಿತರು ಹೆದ್ದಾರಿ ದಾಟಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ಪ್ರಯಾಣಿಕರ ತಂಗುದಾಣ ಇದ್ದು, ಇನ್ನೊಂದು ಬದಿಯಲ್ಲಿ ಅದೂ ಇಲ್ಲದೆ ಇರುವುದು ಬಸ್ಸಿಗಾಗಿ ಕಾಯಲು ಕೂಡಾ ವ್ಯವಸ್ಥೆ ಇಲ್ಲದಂತಾಗಿದೆ.
ಹೆದ್ದಾರಿ ಕಾಮಗಾರಿಯಿಂದ ತಿರುವು ಸಮಸ್ಯೆ ಇದು ಬೋಳಂಗಡಿಗೆ ಮಾತ್ರ ಸೀಮಿತಗೊಳ್ಳದೆ ಇನ್ನೊಂದೆಡೆ ಪಾಣೆಮಂಗಳೂರು ಸಮೀಪದ ನೆಹರುನಗರ ಎಂಬಲ್ಲಿಯೂ ಇದೇ ರೀತಿಯ ಸಮಸ್ಯೆ ಇದೆ. ಇಲ್ಲಿನ ನಿವಾಸಿಗಳು ಒಂದು ಕಡೆಯಿಂದ ಬಿ ಸಿ ರೋಡು ಮುಖ್ಯ ವೃತ್ತಕ್ಕೆ ಬಂದು ತಿರುವು ಪಡೆಯಬೇಕು. ಇನ್ನೊಂದು ಬದಿಯಲ್ಲಿ ಪಾಣೆಮಂಗಳೂರು ಕಲ್ಲುರ್ಟಿ ಗುಡಿ ಬಳಿಗೆ ಬಂದು ತಿರುವು ಪಡೆಯಬೇಕಾಗಿದೆ. ಇಲ್ಲಿಯೂ ಕಿಮೀ ಅಂತರ ಇದ್ದು ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ಸಮಯ ಹಾಗೂ ಹಣ ವ್ಯಯಿಸಬೇಕಾದ ಅನಿವಾರ್ಯತೆ ಇದೆ.
ಹೆದ್ದಾರಿ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳು ಎದುರಿಸುತ್ತಿರುವ ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ಖುದ್ದು ಸಂಸದರು ಹಾಗೂ ಹೆದ್ದಾರಿ ಪ್ರಾಧಿಕಾರ, ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸಾರ್ವಜನಿಕರ ಅಹವಾಲು ಸ್ವೀಕಾರ ನಡೆಸುವ ಮೂಲಕ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾಗಿದೆ.




















0 comments:
Post a Comment