ಮಂಗಳೂರು, ಫೆಬ್ರವರಿ 05, 2026 (ಕರಾವಳಿ ಟೈಮ್ಸ್) : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಂಡುಬರುವ ವಿವಿಧ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸಲು ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ 5 ರಂದು ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿಯ ವಿವಿದೆಡೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಅಗಲೀಕರಣ, ಬೈಪಾಸ್, ಫ್ಲೈ ಓವರ್ ಸೇರಿದಂತೆ ಒಟ್ಟು 24 ವಿವಿಧ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಗುರುತಿಸಲಾಗಿತ್ತು. ಆದರೆ ಕೆಲವು ಪ್ರಮುಖ ಸ್ಥಳಗಳಲ್ಲಿ ಸಂಚಾರ ಕಾರಣ ಮುಂದೊಡ್ಡಿ ಕಾಮಗಾರಿಗಳನ್ನು ಇನ್ನೂ ಕೈಗೊತ್ತಿಕೊಳ್ಳದಿರುವುದು ಕಂಡು ಬಂದಿದೆ. ಇದರಿಂದ ಸಂಚಾರ ಸಮಸ್ಯೆ ಇನ್ನಷ್ಟು ದಟ್ಟಣೆಯಾಗಿದೆ. ಸಂಚಾರ ಪೆÇಲೀಸ್ ಸಹಕಾರ ಪಡೆದು ಈ ಎಲ್ಲಾ ಕಾಮಗಾರಿಗಳನ್ನು ಮುಂದಿನ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿ ಕೂಳೂರು-ನಂತರ ಭಾಗದಲ್ಲಿ ಬೀದಿ ದೀಪ ಅಳವಡಿಸಲು ಮಹಾನಗರಪಾಲಿಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಡೀಸಿ ಸೂಚಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೇದ್ ಅಬ್ದುಲ್ಲಾ ಮಾತನಾಡಿ, ಕೂಳೂರು ಹೊಸ ಸೇತುವೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಸೇತುವೆಯ ಒಂದು ಭಾಗ ಪೂರ್ಣಗೊಳ್ಳಲಿದೆ. ಕೂಳೂರಿನಿಂದ ಬೈಕಂಪಾಡಿವರೆಗೆ ಒಟ್ಟು 6 ಲೇನ್ ಗಳ ಹೆದ್ದಾರಿ ನಿರ್ಮಾಣಗೊಳ್ಳಲಿದೆ. ಈ ರಸ್ತೆಯ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಸರ್ವಿಸ್ ರಸ್ತೆಯೂ ಇರಲಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯುವ ಜಂಕ್ಷನ್ನಿನಲ್ಲಿ ಸಂಚಾರ ದಟ್ಟಣೆ ನಿಭಾಯಿಸಲು ಹೊಸದಾಗಿ ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಮಂಜೂರಾತಿ ದೊರಕಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಜಿಲ್ಲೆಯಲ್ಲಿ 2025 ರ ಅಕ್ಟೋಬರ್ 30 ರವರೆಗೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ 720 ಪ್ರಕರಣಗಳನ್ನು ದಾಖಲಿಸಿ, 17.39 ಲಕ್ಷ ರೂಪಾಯಿ ದಂಡ ಹಾಗೂ ಟಿಂಟೆಡ್ ಗ್ಲಾಸ್ ಅಳವಡಿಸಿದ ವಾಹನಗಳ ಮೇಲೆ 8066 ಪ್ರಕರಣ ದಾಖಲಿಸಿ, 38.39 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಕಲ್ಲಾಪು, ಜಪ್ಪಿನಮೊಗರು, ಮಹಾಕಾಳಿಪಡ್ಪು ಜಂಕ್ಷನ್ ಗಳಲ್ಲಿ ಸಿಗ್ನಲ್ ಗಳನ್ನು ಅಳವಡಿಸುವ ಬಗ್ಗೆ ಟ್ರಾಫಿಕ್ ಪೆÇಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಯಿತು. ನವಮಂಗಳೂರು ವ್ಯಾಪ್ತಿಯಲ್ಲಿ ಟ್ರಕ್, ಲಾರಿಗಳ ಪಾರ್ಕಿಂಗಿಗೆ ತಣ್ಣೀರುಬಾವಿ ಮತ್ತು ಬೈಕಂಪಾಡಿಯಲ್ಲಿ ಎನ್.ಎಂ.ಪಿ.ಎ. ವತಿಯಿಂದ ಟ್ರಕ್ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಭೆಗೆ ತಿಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಡಾ. ಕೆ ಅರುಣ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹಮ್ಮದ್ ನಜೀರ್, ಡಿಸಿಪಿ ರವಿಶಂಕರ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ್ ಮೊದಲಾದವರು ಭಾಗವಹಿಸಿದ್ದರು.














0 comments:
Post a Comment