ಗೃಹಲಕ್ಷ್ಮಿ ನೋಂದಣಿ ಬಾಕಿ ಇರುವವರನ್ನು ತಕ್ಷಣ ನೋಂದಾಯಿಸಲು ಕ್ರಮ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಷಾ ಸೂಚನೆ - Karavali Times ಗೃಹಲಕ್ಷ್ಮಿ ನೋಂದಣಿ ಬಾಕಿ ಇರುವವರನ್ನು ತಕ್ಷಣ ನೋಂದಾಯಿಸಲು ಕ್ರಮ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಷಾ ಸೂಚನೆ - Karavali Times

728x90

10 February 2026

ಗೃಹಲಕ್ಷ್ಮಿ ನೋಂದಣಿ ಬಾಕಿ ಇರುವವರನ್ನು ತಕ್ಷಣ ನೋಂದಾಯಿಸಲು ಕ್ರಮ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಷಾ ಸೂಚನೆ

 ಮಂಗಳೂರು, ಫೆಬ್ರವರಿ 10, 2026 (ಕರಾವಳಿ ಟೈಮ್ಸ್) : ವಿವಿಧ ಸರಕಾರಿ ಇಲಾಖೆಗಳ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸಲು ಜಮೀನನ್ನು ತ್ವರಿತವಾಗಿ ಮಂಜೂರುಗೊಳಿಸಲು ಗ್ರಾಮಿಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಲಾ ಸೂಚಿಸಿದರು. 

ಜಿಲ್ಲಾಧಿಕಾರಿ ಕಚೇರಿಯಲ್ಲಿ ಫೆ 10 ರಂದು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆಗಳ ವಿದ್ಯಾರ್ಥಿಗಳಿಗೆ ನೂತನ ಹಾಸ್ಟೆಲ್ ಕಟ್ಟಡಗಳನ್ನು ಸರಕಾರ ಮಂಜೂರುಗೊಳಿಸುತ್ತಿದ್ದು, ಹಾಸ್ಟೆಲ್ ಹೊಸ ಕಟ್ಟಡಗಳನ್ನು ಶೀಘ್ರವಾಗಿ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಜಮೀನು ಪಡೆಯಲು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ವಿಷಯದಲ್ಲಿ ವಿಳಂಬವನ್ನು ಸಹಿಸಲಾಗದು. ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಬೇಕು. ಆಹಾರ ಗುಣಮಟ್ಟವನ್ನು ಪರಿಶೀಲಿಸಬೇಕು ಎಂದರು. 

ಗ್ಯಾರಂಟಿ ಯೋಜನೆ ಪ್ರಗತಿ ಪರಿಶೀಲಿಸಿದ ಕಾರ್ಯದರ್ಶಿಗಳು, ಗೃಹಲಕ್ಷ್ಮಿ ನೋಂದಣಿ ಬಾಕಿ ಇದ್ದವರನ್ನು ನೋಂದಣಿಗೊಳಿಸಲು ಕ್ರಮ ಕೈಗೊಳ್ಳಬೇಕು. ಗೃಹಲಕ್ಷ್ಮಿ ಮೊತ್ತವನ್ನು ತ್ವರಿತವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಬೇಕು ಎಂದವರು ತಿಳಿಸಿದರು. 

ಕೆ.ಎಸ್.ಆರ್.ಟಿ.ಸಿ ನಿಗಮದಿಂದ 100 ಇ ವಿ ಬಸ್ಸುಗಳು ಮಂಗಳೂರಿಗೆ ಮಂಜೂರಾಗಿರುವುದರಿಂದ ಬಸ್ಸುಗಳನ್ನು ಖರೀದಿಸಿ ಚಾಲನೆಗೊಳಿಸಲು ತ್ವರಿತವಾಗಿ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಚಾರ್ಜಿಂಗ್ ಸ್ಟೇಷನ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಅಳವಡಿಸಿಕೊಳ್ಳಲು ಈಗಿಂದಲೇ ಕ್ರಮ ಕೈಗೊಳ್ಳಬೇಕೆಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಶುಕ್ಲಾ ಸೂಚಿಸಿದರು.

ಜಲಜೀವನ್ ಮಿಷನ್ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ  ಜಿಲ್ಲೆಯಲ್ಲಿ 650 ಕಾಮಗಾರಿಗಳು ಪೂರ್ಣಗೊಂಡು, 482  ಕೋಟಿ  ರೂಪಾಯಿ ವೆಚ್ಚವಾಗಿ, ಶೇಕಡಾ 84ರಷ್ಟು ಪ್ರಗತಿಯಾಗಿದೆ. ಫೆಬ್ರವರಿ ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅವರು ಸೂಚಿಸಿದರು. ಜಲಜೀವನ್ ಕಾಮಗಾರಿ ಸಂದರ್ಭದಲ್ಲಿ ರಸ್ತೆ ಅಗೆತ,  ರಸ್ತೆ ಕಡಿತ ಮತ್ತಿತರ ಸಮಸ್ಯೆಗಳನ್ನು ಕಾಮಗಾರಿ ಪೂರ್ಣಗೊಂಡ ನಂತರ ಸಮರ್ಪಕವಾಗಿ ದುರಸ್ತಿಗೊಳಿಸಬೇಕು ಎಂದು ಸಮೀರ್ ಶುಕ್ಲಾ ತಿಳಿಸಿದರು.

ಹರ್ ಘರ್ ಜಲ ಯೋಜನೆ ಕಾಮಗಾರಿ ಮುಗಿದ ನಂತರ ಗ್ರಾಮ ಸಭೆಗಳಲ್ಲಿ ದೃಢೀಕರಿಸಬೇಕೆಂದು ಅವರು ತಿಳಿಸಿದರು. ವಿವಿಧ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೂ ಕಾಮಗಾರಿ ಇನ್ನೂ ಶುರು ಮಾಡದ ಬಗ್ಗೆ ಅವರು ಕೆ.ಆರ್.ಐ.ಡಿ.ಎಲ್ ಸಂಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. 

ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ  ನರ್ವಾಡೆ ವಿನಾಯಕ್ ಕಾರ್ಬಾರಿ, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಗೃಹಲಕ್ಷ್ಮಿ ನೋಂದಣಿ ಬಾಕಿ ಇರುವವರನ್ನು ತಕ್ಷಣ ನೋಂದಾಯಿಸಲು ಕ್ರಮ ಕೈಗೊಳ್ಳಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸಮೀರ್ ಶುಕ್ಷಾ ಸೂಚನೆ Rating: 5 Reviewed By: karavali Times
Scroll to Top