ಬಂಟ್ವಾಳ, ಫೆಬ್ರವರಿ 09, 2026 (ಕರಾವಳಿ ಟೈಮ್ಸ್) : ಬಿ ಸಿ ರೋಡಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮರಳಿನ ರಾಶಿ ಕಂಡು ಬರುತ್ತಿದ್ದು, ಪಾದಚಾರಿಗಳು ನಡೆದಾಡಲೂ ಸಂಕಟಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೇಟೆಯ ಫ್ಲೈ ಓವರ್ ಕೆಳ ಭಾಗದಲ್ಲಿ ಈ ಪರಿಸ್ಥಿತಿ ಇದ್ದು, ಪಾದಚಾರಿ ರಸ್ತೆ ಇಲ್ಲದೆ ಜನ ಹೆದ್ದಾರಿ ಬದಿಯಲ್ಲೇ ನಡೆದಾಡಬೇಕಾಗಿದೆ. ಹೆದ್ದಾರಿ ಬದಿಯಲ್ಲಿ ಈ ರೀತಿ ಮರಳಿನ ರಾಶಿ ಇದ್ದು ನಡೆದಾಲು ಸಾಧ್ಯವಾಗುತ್ತಿಲ್ಲ. ನಡೆಯುವ ಸಂದರ್ಭ ಚಪ್ಪಲಿಗಳು ಮರಳಿನಲ್ಲಿ ಸ್ಪಿಪ್ ಆಗುತ್ತಿದ್ದು, ವಾಹನಗಳ ಸಂಚಾರದ ಭರಾಟೆಯಿಂದ ಅಪಾಯಗಳು ಸಂಭವಿಸುವ ಆತಂಕ ಎದುರಾಗಿದೆ. ಜನ ನಡೆದಾಡುವ ವೇಳೆ ರಕ್ಷಣೆಗಾಗಿ ಫ್ಲೈ ಓವರ್ ಬದಿಯಲ್ಲಾದರೂ ನಡೆದುಕೊಂಡು ಹೋಗುವ ಪರಿಸ್ಥಿತಿ ಇಲ್ಲ. ಫ್ಲೈ ಓವರ್ ಬದಿಗಳಲ್ಲಿ ದಿಡ್ಡು ಕಟ್ಟಿ ಅದಕ್ಕೆ ಕಬ್ಬಿಣದ ಗೇಟ್ ಅಳವಡಿಸಲಾಗಿದೆ. ದ್ವಿಚಕ್ರ ವಾಹನ ಸವಾರರು ಹೆದ್ದಾರಿ ಬದಿಯಲ್ಲಿ ಸಂಚರಿಸುವ ಸಂದರ್ಭ ಇಲ್ಲಿನ ಮರಳಿಗೆ ಸಿಲುಕಿ ಸ್ಕಿಡ್ ಆಗುವ ಸಾಧ್ಯತೆಗಳೂ ಹೆಚ್ಚಾಗಿದೆ. ದ್ವಿಚಕ್ರ ವಾಹನ ಸವಾರರಿಗೂ ಅಪಾಯಕಾರಿ ಸನ್ನಿವೇಶ ನಿರ್ಮಿಸಿದೆ.
ಹೆದ್ದಾರಿ ಪ್ರಾಧಿಕಾರ ಕೆಲವೆಡೆ ಹೆದ್ದಾರಿ ಬದಿಗಳನ್ನು ನಿರ್ವಹಣೆ ಮಾಡುವ ಕಾಮಗಾರಿಗಳನ್ನು ನಡೆಸುತ್ತಿದೆಯಾದರೂ ಬಿ ಸಿ ರೋಡಿನ ಸಮಸ್ಯೆಗ ಬಗ್ಗೆ ಇನ್ನೂ ಕಣ್ಣೆತ್ತಿಯೂ ನೋಡಿಲ್ಲ. ಸ್ಥಳೀಯ ಶಾಸಕರ ಸುಂದರ ಬಿ ಸಿ ರೋಡು ಪರಿಕಲ್ಪನೆಯಲ್ಲೂ ಈ ಕಾಮಗಾರಿ ಒಳಗೊಂಡಿಲ್ಲ. ಇದರಿಂದಾಗಿ ಇಲ್ಲಿನ ಸಮಸ್ಯೆ ಹಲವು ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದು ಬಿಟ್ಟಿದೆ.
ಈ ಬಗ್ಗೆ ಹೆದ್ದಾರಿ ಇಲಾಖೆ ತುರ್ತು ಕ್ರಮ ಕೈಗೊಂಡು ಬಿ ಸಿ ರೋಡು ಪೇಟೆಯಲ್ಲಿ ಪಾದಚಾರಿಗಳು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗೆ ಕಾಯಕಲ್ಪ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.















0 comments:
Post a Comment