ಮಂಗಳೂರು, ಫೆಬ್ರವರಿ 09, 2026 (ಕರಾವಳಿ ಟೈಮ್ಸ್) : ಸ್ಥಳೀಯಾಡಳಿತಗಳು ಪದೇ ಪದೇ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಅಲ್ಲಲ್ಲಿ ಬ್ಯಾನರ್, ಪೋಸ್ಟರ್ ಅಳವಡಿಕೆಗೆ ನಿಯಮ ರೂಪಿಸುತ್ತಿದ್ದರೂ ಅದ್ಯಾವುದೂ ಸಮಪರ್ಕವಾಗಿ ಜಾರಿಗೆ ಬರುತ್ತಿಲ್ಲ. ಮಳೆಗಾಲ ಮುಗಿದ ತಕ್ಷಣ ಉತ್ಸವ-ಮಹೋತ್ಸವ, ಖಾಸಗಿ ಕಾರ್ಯಕ್ರಮಗಳ ಸೀಝನ್ ಬರುತ್ತಲೇ ಪೇಟೆ-ಪಟ್ಟಣ, ಜಂಕ್ಷನ್‍ಗಳೆಂದಿಲ್ಲದೆ ಅಲ್ಲಲ್ಲಿ ಬ್ಯಾನರ್, ಪೋಸ್ಟರ್‍ಗಳೇ ರಾರಾಜಿಸುತ್ತಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸ್ಥಳೀಯಾಡಳಿತಗಳು ಕೆಲವೊಂದು ಪ್ರಭಾವ ಕಾರಣಗಳಿಂದ ಹಿಂದೇಟು ಹಾಕುತ್ತಿದೆ. ನಿಯಮ ರೂಪಿಸಿದವರೇ ಅವುಗಳನ್ನು ಉಲ್ಲಂಘಿಸುವ ಸಂದರ್ಭ ಅಧಿಕಾರಿಗಳ ಕೈ ಕಟ್ಟಿ ಹಾಕಿದ ಪರಿಸ್ಥಿತಿ ಉಂಟಾಗುತ್ತಿದೆ. ಈ ಬಗ್ಗೆ ಕ್ಲೀನ್ ಸಿಟಿ ನಿರ್ಮಾಣದ ನಿಟ್ಟಿನಲ್ಲಿ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರಕ್ಕೆ ಬಂದು ಜಿಲ್ಲಾಧಿಕಾರಿಗಳೇ ಸ್ವತಃ ಲಿಖಿತ ನಿಯಮ ಜಾರಿ ಮಾಡುವುದರ ಮೂಲಕ ಕಡಿವಾಣ ಹಾಕಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಜಿಲ್ಲೆಯ ಹಲವು ಪೇಟೆ-ಪಟ್ಟಣಗಳ ಎಲ್ಲೆಂದರಲ್ಲಿ ಬ್ಯಾನರ್‍ಗಳು ರಾರಾಜಿಸುತ್ತಿದೆ. ವಾಹನ ಸವಾರರ ಪಾಲಿಗೆ ತೀರಾ ಅಪಾಯಕಾರಿಯಾದ ಸ್ಥಳಗಳಲ್ಲೂ ಬ್ಯಾನರ್ ಅಳವಡಿಸಲಾಗುತ್ತಿದೆ. ವಾಹನ ಸಂಚಾರದ ವೇಳೆ ಎದುರಿನಿಂದ ಬರುವ ವಾಹನ ಗೋಚರವಾಗದಂತ ಸ್ಥಿತಿಯಲ್ಲಿ ತಿರುವುಗಳಂತಹ ಪ್ರದೇಶಗಳಲ್ಲೂ ಬ್ಯಾನರ್ ಅಳವಡಿಸುತ್ತಿರುವುದರಿಂದ ಗಂಭೀರ ಅಪಘಾತಗಳಿಗೂ ಕಾರಣವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಸಂಬಂಧಪಟ್ಟ ಸ್ಥಳೀಯಾಡಳಿತಗಳಿಗೆ ದೂರು ನೀಡಿದರೂ ಯಾವುದೇ ಲಿಖಿತ ಆದೇಶ ಇಲ್ಲದೆ ಇರುವುದರಿಂದ ಅಧಿಕಾರಿಗಳಿಗೆ ಇವುಗಳನ್ನು ತೆರವುಗೊಳಿಸಲು ಪ್ರಭಾವಿ ವ್ಯಕ್ತಿಗಳು ಅಡ್ಡಿಯಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕಾರ್ಯಕ್ರಮ ಆಯೋಜಕರು ಕಾರ್ಯಕ್ರಮ ನಡೆಯುವುದಕ್ಕೆ ಮೊದಲು ಬ್ಯಾನರ್ ಅಳವಡಿಸುವ ಸಂದರ್ಭ ತೋರುವ ಉತ್ಸಾಹ ಕಾರ್ಯಕ್ರಮ ಮುಗಿದ ಬಳಿಕ ಅವುಗಳನ್ನು ತೆರವುಗೊಳಿಸುವಲ್ಲಿ ತೋರುತ್ತಿಲ್ಲ. ಪರಿಣಾಮ ಅಲ್ಲಿ ಅಳವಡಿಸಿದ ಬ್ಯಾನರುಗಳು ಕಾರ್ಯಕ್ರಮ ಮುಗಿದು ವಾರಗಟ್ಟಲೆ ಅಲ್ಲೇ ಕೊಳೆಯುತ್ತಿರುತ್ತದೆ. ಕೆಲವೊಮ್ಮೆ ಸ್ಥಳೀಯ ಸಂಸ್ಥೆಗಳು ತೆರವುಗೊಳಿಸುವುದನ್ನೇ ಕಾಯುವಂತಿರುತ್ತದೆ. ಅಲ್ಲದೆ ಇನ್ನು ಕೆಲವರು ಒಂದು ಸ್ಥಳ ನಿಗದಿಪಡಿಸಿ ಅದನ್ನು ತಮ್ಮ ಸ್ವಂತ ಖಾಸಗಿ ಆಸ್ತಿ ಎಂಬಂತೆ ವರ್ತಿಸುತ್ತಿದ್ದು, ವರ್ಷಪೂರ್ತಿ ಒಂದಲ್ಲ ಒಂದು ಕಾರ್ಯಕ್ರಮಗಳ ಬಗ್ಗೆ ತಮ್ಮ ಫೋಟೋ ಹಾಕಿ ಬ್ಯಾನರ್ ರಾರಾಜಿಸುವಂತೆ ಮಾಡುತ್ತಿರುವುದೂ ಕಂಡುಬರುತ್ತಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತೀ ತಾಲೂಕು ದಂಡಾಧಿಕಾರಿಗಳಿಗೆ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಲಿಖಿತ ನಿಯಮ ಜಾರಿ ಮಾಡುವ ಮೂಲಕ ಬ್ಯಾನರ್ ಮುಕ್ತ ಕ್ಲೀನ್ ಸಿಟಿ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತ ಜನ ಆಗ್ರಹಿಸಿದ್ದಾರೆ. ಅಲ್ಲದೆ ಸ್ಥಳೀಯಾಡಳಿತಗಳು ಬ್ಯಾನರ್ ಅಳವಡಿಸಲು ಸೂಕ್ತ ಸ್ಥಳ ಗೊತ್ತುಪಡಿಸಿ ನಿರ್ದಿಷ್ಟ ಮೊತ್ತದ ಶುಲ್ಕ ವಿಧಿಸುವ ಮೂಲಕ ಹಾಗೂ ನಿಗದಿತ ಸಮಯದ ಬಳಿಕ ಅಲ್ಲೇ ಉಳಿಯುವ ಬ್ಯಾನರುಗಳಿಗೆ ದಿನವೊಂದಕ್ಕೆ ಇಂತಿಷ್ಟು ದಂಡ ವಿಧಿಸುವ ಮೂಲಕ ಖಜಾನೆಗೆ ಆದಾಯವನ್ನು ತಂದುಕೊಳ್ಳುವ ಬಗ್ಗೆಯೂ ತೀರ್ಮಾನ ಕೈಗೊಳ್ಳಬಹುದು ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿದೆ.














0 comments:
Post a Comment