ಬಂಟ್ವಾಳ, ಮಾರ್ಚ್ 22, ಮಾರ್ಚ್, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಅವೈಜ್ಞಾನಿಕ ಟೋಲ್ ಗೇಟಿನ ಅವಾಂತರ ಮುಂದುವರಿದಿದೆ. ಇಲ್ಲಿನ ಟೋಲ್ ಗೇಟ್ ರಸ್ತೆಯ ಮಧ್ಯದಲ್ಲೇ ಕಾಂಕ್ರಿಟ್ ಪಿಲ್ಲರ್ ಬೆಡ್ ರೀತಿಯ ನಿರ್ಮಾಣವೊಂದು ಇದ್ದು, ಇದು ವಾಹನ ಸವಾರರ ಪಾಲಿಗೆ ತೀರಾ ಅಪಾಯಕಾರಿಯಾಗಿ ಪರಿಣಮಿಸಿದೆ.
ಟೋಲ್ ಗೇಟ್ ರಸ್ತೆಯಲ್ಲಿ ವಾಹನ ಸಂಚಾರದ ಸ್ಥಳಲ್ಲೇ ಈ ಬೆಡ್ ರೀತಿಯ ಕಾಂಕ್ರಿಟ್ ದಿಡ್ಡು ಇದ್ದು, ಇದು ನಿರ್ಮಿಸಿರುವ ಬಗ್ಗೆ ಯಾವುದೇ ಪೂರ್ವ ಸೂಚನೆಯಾಗಲೀ, ಸುರಕ್ಷತಾ ಕ್ರಮವಾಗಲೀ ಅಳವಡಿಸದೆ ಇರುವ ಪರಿಣಾಮ ಶನಿವಾರ ರಾತ್ರಿ ಸ್ಕೂಟರಿನ ಹಿಂದುಗಡೆ ಕುಳಿತು ಸಂಚರಿಸುತ್ತಿದ್ದ ಮಹಿಳೆಯ ಕಾಲಿಗೆ ತಾಗಿ ತೀವ್ರತರ ಗಾಯಗಳಾಗಿವೆಯಲ್ಲದೆ ಕಾಲಿನ ಮಣಿಗಂಟಿಗೂ ತೀವ್ರ ನೋವುಂಟಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಘಟನೆ ನಡೆದ ಅದೇ ಸಮಯದಲ್ಲಿ ಬಂದ ಲಾರಿ ಚಾಲಕನ ಗಮನಕ್ಕೂ ಇದು ಬಾರದೆ ಲಾರಿಯೂ ಇದೇ ಬೆಡ್ಡಿಗೆ ಡಿಕ್ಕಿ ಹೊಡೆದು ಹಾನಿ ಸಂಭವಿಸಿದೆ ಎನ್ನಲಾಗಿದೆ. ಈ ಸಂದರ್ಭ ವಾಹನ ಸವಾರರು ಹಾಗೂ ಟೋಲ್ ಗೇಟ್ ಸಿಬ್ಬಂದಿಗಳ ನಡುವೆ ಕೆಲ ಕಾಲ ಮಾತಿನ ವಿನಿಮಯವೂ ನಡೆಸಿದೆ ಎಂದು ತಿಳಿದು ಬಂದಿದೆ. ಆದರೆ ಟೋಲ್ ಬೂತಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾರೂ ಇಲ್ಲದೆ ಇದ್ದು, ಉತ್ತರ ಭಾರತ ಮೂಲದ ಸಿಬ್ಬಂದಿಗಳು ಮಾತ್ರ ಇದ್ದು ಯಾವುದೇ ಪರಿಹಾರ ದೊರೆತಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಮೊದಲೇ ಅವೈಜ್ಞಾನಿಕವಾಗಿರುವ ಇಲ್ಲಿನ ಟೋಲ್ ಗೇಟಿನಲ್ಲಿ ಇದೀಗ ಮತ್ತೆ ಇಂತಹ ಅಸುರಕ್ಷತಾ ವ್ಯವಸ್ಥೆಗಳನ್ನು ನಿರ್ಮಿಸುತ್ತಿದ್ದು, ಇದೆಲ್ಲವೂ ಜನರ ಜೀವದ ಮೇಲೆ ಚೆಲ್ಲಾಟವಾಡುವ ರೀತಿಯಲ್ಲಿದೆ. ಅವ್ಯವಸ್ಥೆಯ ಆಗರವಾಗಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಎಂಬುದು ಜನರ ರಕ್ತ ಹೀರುವ ವಸೂಲಿ ಕೇಂದ್ರವಾಗಿ ಮಾತ್ರ ಬಾಳಿ ಉಳಿದಿದೆ. ಇಲ್ಲಿನ ಅವ್ಯವಸ್ಥೆಗಳನ್ನು ಪ್ರಶ್ನಿಸಿ ಟೋಲ್ ಗೇಟ್ ರದ್ದುಪಡಿಸಬೇಕು ಎಂದು ಇತ್ತೀಚೆಗೆ ಕೆಲ ಸಮಾನ ಮನಸ್ಕರು ಪ್ರತಿಭಟನೆ ಹಮ್ಮಿಕೊಂಡು ತೀವ್ರ ಹೋರಾಟ ಮುಂದುವರಿಸಲಾಗುವುದು ಎಂದು ಅಬ್ಬರಿಸಿ ಹೋಗಿ ತಿಂಗಳಾಗುತ್ತಾ ಬಂದರೂ ಆ ಬಳಿಕ ಯಾವುದೇ ಬೆಳವಣಿಗೆ ನಡೆದಿಲ್ಲ. ಹೋರಾಟಗಾರರು ಕಾಲ್ಕಿತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

































0 comments:
Post a Comment