ಮುಂದಿನ ಬಾರಿ ಅವರೇ ಅಭ್ಯರ್ಥಿ, ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸಿ : 15ನೇ ವರ್ಷದ ಮೂಡೂರು-ಪಡೂರು “ಬಂಟ್ವಾಳ ಕಂಬಳೋತ್ಸವ”ದಲ್ಲಿ ಮುಖ್ಯಮಂತ್ರಿ ಕರೆ
ಬಂಟ್ವಾಳ, ಮಾರ್ಚ್ 08, 2026 (ಕರಾವಳಿ ಟೈಮ್ಸ್) : ಪ್ರಾಮಾಣಿಕ ಸರಳ ಸಜ್ಜನಿಕೆಯ ರಾಜಕಾರಣಿ, ಕ್ಷೇತ್ರಕ್ಕ 5 ಸಾವಿರ ಕೋಟಿ ರೂಪಾಯಿ ಅನುದಾನ ತಂದು ಭರಪೂರ ಅಭಿವೃದ್ದಿ ಮಾಡಿದ ರಮಾನಾಥ ರೈ ಅವರು ಸೋತದ್ದೇ ಬಹಳ ನೋವಿನ ಸಂಗತಿ. ಅವರು ಯಾವುದೇ ಕಾರಣಕ್ಕೂ ಸೋಲಬಾರದಿತ್ತು. ಆದರೆ ಕ್ಷೇತ್ರದ ಜನ ಸೋಲಿಸಿದರು. ಸೋಲಿಸಿರುವುದು ನ್ಯಾಯವಲ್ಲ. ಕ್ಷೇತ್ರದ ಅಭಿವೃದ್ದಿ ಜೊತೆಗೆ ಜನರ ಒಳಿತಿಗಾಗಿ ಕೆಲಸ ಮಾಡಿದ್ದರು. ಅವರ ಸೋಲು ನೋವಿನ ಸಂಗತಿ ಅಲ್ಲದೆ ಇನ್ನೇನು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ನಾವೂರು ಗ್ರಾಮದ ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ಷತೆಯಲ್ಲಿ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7ರಂದು ಆರಂಗೊಂಡ 15ನೇ ಹೊನಲು ಬೆಳಕಿನ ಮೂಡೂರು-ಪಡೂರು ಜೋಡುಕರೆ ಬಯಲು ಕಂಬಳದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಮಾನಾಥ ರೈ ಅವರು ನನ್ನ ಸಂಪುಟದಲ್ಲಿದ್ದ ಕಾಲವನ್ನು ರಾಜಕೀಯದ ಸುವರ್ಣ ಯುಗ ಎಂದೇ ಬಣ್ಣಿಸಬಹುದು. ರಮಾನಾಥ ರೈ ಅವರ ಕನಸಿಕ ಯೋಜನೆಯಾಗಿರುವ ತಾಲೂಕು ಕ್ರೀಡಾಂಗಣವನ್ನು ಮುಂದಿನ ವರ್ಷ ಸೂಕ್ತ ಅನುದಾನ ಒದಗಿಸಿ ಪೂರ್ತಿಗೊಳಿಸಲಾಗುವುದು. ಮುಂದಿನ ಬಾರಿ ಅಂದರೆ 2028ರ ಚುನಾವಣೆಯಲ್ಲಿ ಮತ್ತೆ ರಮಾನಾಥ ರೈ ಅವರೇ ಬಂಟ್ವಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದು ಅವರನ್ನು ಮತ್ತೆ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಿ ಎಂದು ಕರೆ ನೀಡಿದರು.
ಮುಂದಿನ ಬಾರಿಯೂ ನಾವೇ ಗೆಲ್ತೀವಿ, ನಾವೇ ಅಧಿಕಾರಕ್ಕೆ ಬರುತ್ತೇವೆ. ನಮ್ಮ ಅಧಿಕಾರದಲ್ಲಿ ಕಂಬಳಕ್ಕೆ ಏನು ಪೆÇ್ರೀತ್ಸಾಹ ನೀಡಬೇಕೋ ಅದನ್ನೆಲ್ಲ ನೀಡುತ್ತೇವೆ. ಸೂಕ್ತ ಅನುದಾನ ಬಿಡುಗಡೆ ಮಾಡುವ ಮೂಲಕ ಆರ್ಥಿಕ ನೆರವನ್ನೂ ಕೊಡ್ತೇವೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ಮುಖ್ಯಮಂತ್ರಿಯಾಗಿ ಸಮಾಜದ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡ್ತೇನೆ. ಬಡವರು, ದಲಿತರು, ರೈತರು, ಕಾರ್ಮಿಕರು, ಹೆಣ್ಣು ಮಕ್ಕಳು, ಶೋಷಿತರು ಇವರೆಲ್ಲರ ಪರವಾಗಿ ಕೆಲಸ ಮಾಡಲು ಪ್ರಯತ್ನ ಮಾಡ್ತೇನೆ. ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡಾ ಮುಖ್ಯ ವಾಹಿನಿಗೆ ಬರಬೇಕು. ಸಮಾಜದಲ್ಲಿ ನಿಶ್ಶಕ್ತಿಯಿಂದ ಇರುವವರಿಗೆ ಶಕ್ತಿ ತುಂಬುವುದೇ ನಮ್ಮ ಸರಕಾರ ಗುರಿ. ಅದಕ್ಕಾಗಿಯೇ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ಬರಬೇಕು. ಮಹಾತ್ಮಾ ಗಾಂಧಿ ಅವರ ಸರ್ವೋದಯ, ಅಂತ್ಯೋದಯ ಎಂಬ ಹೇಳಿಕೆ ಸಾಕಾರಗೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ ಎಂದರು. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು. ಆಗ ಮಾತ್ರ ಸ್ಥಿರ ಸಮಾಜ ನಿರ್ಮಾಣ ಸಾಧ್ಯ. ಜನರ ಏಳಿಗೆಗೆ ಸರ್ವವನ್ನೂ ಮಾಡಿದ್ದೇವೆ. ಮುಂದೆಯೂ ಮಾಡ್ತೇವೆ. ಮುಂದಿನ ಅವಧಿಯಲ್ಲೂ ಜನ ನಮ್ಮ ಕೈ ಹಿಡಿತಾರೆ ಎಂಬ ವಿಶ್ವಾಸ ಖಂಡಿತಾ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಂಬಳ ಅತ್ಯಂತ ಜನಪ್ರಿಯ ಕ್ರೀಡೆ. ಇದನ್ನು ಎಲ್ಲ ಜಾತಿ, ಧರ್ಮೀಯರು ಸೇರಿ ನೋಡಿ ಸಂಭ್ರಮಿಸುತ್ತಾರೆ. ಈ ಕ್ರೀಡೆಯನ್ನು ಉಳಿಸಿ, ಬೆಳೆಸುವುದು ನಮ್ಮ ಜವಾಬ್ದಾರಿ. ದಕ್ಷಿಣ ಕನ್ನಡದಲ್ಲಿ ಎಲ್ಲರೂ ಭಾಗವಹಿಸುವ ಕ್ರೀಡೆ. ಮಂಗಳೂರಿನ ಜನ ಸಾಹಸಪ್ರವೃತ್ತಿ ಇರುವವರು. ಇಂತಹ ಕ್ರೀಡೆಯನ್ನು ಯುವ ಜನರಿಗೆ ಜನಪ್ರಿಯಗೊಳಿಸುವುದು ಅವಶ್ಯಕ. ಕಂಬಳ ಕೋಣಗಳ ಯಜಮಾನರು ಕೋಣಗಳನ್ನು ಮಕ್ಕಳ ತರ ಸಾಕ್ತಾರೆ ಎಂದು ಸಿಎಂ ಶ್ಲಾಘಿಸಿದರು.
ಇದೇ ವೇಳೆ ಕನೆಹಲಗೆಯ ಕೋಣಗಳ ಓಟವನ್ನು ವೀಕ್ಷಿಸಿದ ಮುಖ್ಯಮಂತ್ರಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಕಂಬಳಕ್ಕೆ ರಾಜ್ಯಮಟ್ಡದಲ್ಲಿ ಮಾನ್ಯತೆ ಇದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಅವರನ್ನು ಕಂಬೋಳತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹಾಗೂ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಅವರ ನೇತೃತ್ವದಲ್ಲಿ ಕಂಬಳ ಸಮಿತಿ ವತಿಯಿಂದ ಕಂಬಳದ ಬೆತ್ತವನ್ನು ಹಾಗೂ ನೊಗ ಇರುವ ಸ್ಮರಣಿಕೆಯನ್ನು ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿದ್ಯಾವಾಚಸ್ಪತಿ ಡಾ ಸಂತೋಷ್ ಗುರೂಜಿ ಆಶೀರ್ವಚನಗೈದರು. ಎಂಎಸ್ಲಿ ಸಲೀಂ ಆಹ್ಮದ್, ಐವನ್ ಡಿಸೋಜ, ಶಾಸಕರುಗಳಾದ ಅಶೋಕ್ ಕುಮಾರ್ ರೈ, ಟಿ ಡಿ ರಾಜೇಗೌಡ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ನಾಟಕ ರಾಜ್ಯ ಎಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ ಯು ಟಿ ಇಫ್ತಿಕಾರ್ ಅಲಿ, ವಿವಿಧ ನಿಗಮಗಳ ಅಧ್ಯಕ್ಷರುಗಳಾದ ಲಾವಣ್ಯ ಬಲ್ಲಾಳ್, ಟಿ ಎಂ ಶಹೀದ್ ತೆಕ್ಕಿಲ್, ಮಮತಾ ಡಿ ಎಸ್ ಗಟ್ಟಿ, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ಸಿಎಂ ಅವರ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ರಮಾನಾಥ ಅವರ ಧರ್ಮ ಪತ್ನಿ ಧನಭಾಗ್ಯ ಆರ್ ರೈ, ಪ್ರಮುಖರಾದ ಪದ್ಮರಾಜ್ ಆರ್ ಪೂಜಾರಿ, ಕೃಪಾ ಆಳ್ವ, ಧರ್ಮಗುರು ವಿಕ್ಟರ್ ಡಿಸೋಜ, ವಿಲ್ಪ್ರೆಡ್ ರೋಡ್ರಿಗಸ್ ಮೈಸೂರು, ಶಕುಂತಳಾ ಶೆಟ್ಟಿ, ಚೆನ್ನವೇಣಿ ಶೆಟ್ಟಿ, ಅಶ್ವನಿಕುಮಾರ್ ರೈ, ದೀಪಕ್ ಕುಮಾರ್ ರೈ, ಉದಯ ಹೆಗ್ಡೆ, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ್ ಜೈನ್, ಕೆ ಪದ್ಮನಾಭ ರೈ ಕಲ್ಲಡ್ಕ, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ರಾಜೀವ್ ಶೆಟ್ಟಿ ಎಡ್ತೂರು, ಫಿಲಿಪ್ ಫ್ರಾಂಕ್ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.

































0 comments:
Post a Comment