ಬಂಟ್ವಾಳ, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಮಕ್ಕಳಿಗೆ ಹೊಡೆಯುತ್ತಿದ್ದ ಅಣ್ಣನನ್ನು ಪ್ರಶ್ನಿಸಿದ ಕಾರಣಕ್ಕೆ ತಮ್ಮ ಹಾಗೂ ತಾಯಿಗೆ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಪಂಜಿಕಲ್ಲು ಗ್ರಾಮದ ಬೈದ್ಯಾರು ಎಂಬಲ್ಲಿ ಮಾರ್ಚ್ 1 ರಂದು ನಡೆದಿದೆ.
ಗಾಯಗೊಂಡವರನ್ನು ಉಮೇಶ್ (32) ಹಾಗೂ ಅವರ ತಾಯಿ ಕರ್ಗಿ ಎಂದು ಹೆಸರಿಸಲಾಗಿದೆ. ಈ ಹಲ್ಲೆ ನಡೆಸಿದ ಆರೋಪಿಯನ್ನು ಸಹೋದರ ನಾರಾಯಣ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಗಾಯಾಳು ಉಮೇಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮಾ 1 ರಂದು ಕೆಲಸಕ್ಕೆ ರಜೆ ಇದ್ದುದರಿಂದ ತಾಯಿಯೊಂದಿಗೆ ಮನೆಯಲ್ಲಿದ್ದಾಗ ಸಂಜೆ ಅಣ್ಣ ನಾರಾಯಣ ಅವರ ಮನೆಯಿಂದ ಮಕ್ಕಳು ಬೊಬ್ಬೆ ಹೊಡೆಯುವುದನ್ನು ಕೇಳಿ ಅಲ್ಲಿಗೆ ಹೋಗಿ ಯಾಕೆ ಮಕ್ಕಳಿಗೆ ಹೊಡೆಯುತ್ತಿಯಾ ಎಂದು ಕೇಳಿದಾಗ ಏಕಾಏಕಿಯಾಗಿ ನಾರಾಯಣ ಅವರು ಉಮೇಶ ಅವರಿಗೆ ಅವಾಚ್ಯವಾಗಿ ಬೈದು ನಿಕ್ಕ ದಾಯೇ ಎನ್ನ ಇಲ್ಲದ ವಿಚಾರ ಎಂಬುದಾಗಿ ತುಳು ಭಾಷೆಯಲ್ಲಿ ಬೈದು ಅವನ ಮನೆಯ ಅಂಗಳದಲ್ಲಿ ಬಿದ್ದಿದ್ದ ಕಬ್ಬಿಣದ ರಾಡ್ ಹಿಡಿದುಕೊಂಡು ಬಂದು ರಸ್ತೆಗೆ ಬರುತ್ತಿದ್ದ ಉಮೇಶ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಹೊಡೆತದಿಂದ ಉಮೇಶ ಅವರು ನೋವು ತಾಳಲಾರದೆ ಬೊಬ್ಬೆ ಹೊಡೆದಾಗ ತಾಯಿ ಕರ್ಗಿ ಗಲಾಟೆ ಬಿಡಿಸಲು ಬಂದಾಗ ನಾರಾಯಣ ತಾಯಿಯವರನ್ನು ಕೈಯಿಂದ ದೂಡಿ ಹಾಕಿದ್ದಾರೆ. ಕೆಳಗೆ ಬಿದ್ದ ತಾಯಿಯ ಸೊಂಟಕ್ಕೆ ನೋವಾಗಿದ್ದು. ಆ ಸಮಯ ಇಬ್ಬರು ಬೊಬ್ಬೆ ಹಾಕುವುದನ್ನು ಕೇಳಿ ಅಕ್ಕನ ಮನೆಯಲ್ಲಿದ್ದ ಸೀತಾರಾಮ ಅವರು ಓಡಿ ಬರುವುದನ್ನು ಕಂಡು ನಾರಾಯಣ ಅವರು ಈಗ ನೀವು ಬದುಕಿದ್ದೀರಿ ನಿಮ್ಮನ್ನು ಮುಂದಕ್ಕೆ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಕೈಯಲ್ಲಿದ್ದ ಕಬ್ಬಿಣದ ರಾಡ್ ಅಲ್ಲೆ ಬಿಸಾಡಿ ಹೋಗಿರುತ್ತಾನೆ.
ಗಾಯಗೊಂಡ ಉಮೇಶ ಹಾಗೂ ತಾಯಿಯವರನ್ನು ಸೀತಾರಮ ಅವರು ಅಟೋರಿಕ್ಷಾದಲ್ಲಿ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















0 comments:
Post a Comment