ಬೆಂಗಳೂರು, ಮಾರ್ಚ್ 29, ಮಾರ್ಚ್, 2026 (ಕರಾವಳಿ ಟೈಮ್ಸ್) : ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ವಿಶೇಷವಾಗಿ ಆಟೋ ಎಲ್.ಪಿ.ಜಿ.ಗೆ ಯಾವುದೇ ರೀತಿಯ ಕೊರತೆ ಇಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಎಲ್.ಪಿ.ಜಿ. ಸರಬರಾಜು ವ್ಯವಸ್ಥೆಯನ್ನು, ವಿಶೇಷವಾಗಿ ಆಟೋ ಎಲ್.ಪಿ.ಜಿ. ಪೂರೈಕೆಯನ್ನು ರಾಜ್ಯ ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ. ಕರ್ನಾಟಕದಾದ್ಯಂತ ಒಟ್ಟು 72 ಆಟೋ ಎಲ್.ಪಿ.ಜಿ. ಡಿಸ್ಪೆನ್ಸಿಂಗ್ ಸ್ಟೇಷನ್‍ಗಳು (ಎ ಎಲ್ ಡಿ ಎಸ್) ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೇವಲ ಬೆಂಗಳೂರು ನಗರವೊಂದರಲ್ಲೇ 31 ಕೇಂದ್ರಗಳು ಲಭ್ಯವಿವೆ.
ಸಾರ್ವಜನಿಕ ವಲಯದ ಪ್ರಮುಖ ತೈಲ ಮಾರಾಟ ಕಂಪೆನಿಗಳಾದ (ಒಎಂಸಿಸ್), ಐಒಸಿಲ್, ಬಿಪಿಸಿಎಲ್ ಹಾಗೂ ಎಚ್ ಪಿ ಸಿ ಎಲ್ ಮೂಲಕ ಆಟೋ ಎಲ್.ಪಿ.ಜಿ. ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಈ ಸಂಸ್ಥೆಗಳು ಪ್ರತಿ ಲೀಟರ್‍ಗೆ 77.74 ರೂಪಾಯಿ ದರದಲ್ಲಿ ಆಟೋ ಎಲ್.ಪಿ.ಜಿ. ಪೂರೈಸುತ್ತಿವೆ.
ಕಳೆದ ವಾರದಲ್ಲಿ ದಿನಕ್ಕೆ ಸರಾಸರಿ 64.9 ಮೆಟ್ರಿಕ್ ಟನ್ ಆಟೋ ಎಲ್.ಪಿ.ಜಿ. ವಿತರಿಸಲಾಗಿದೆ. ಸಂಘರ್ಷದ ಮೊದಲು ಈ ಪ್ರಮಾಣವು ದಿನಕ್ಕೆ 57.6 ಮೆಟ್ರಿಕ್ ಟನ್ ಇತ್ತು. ಇದು ಪೂರೈಕೆಯಲ್ಲಿನ ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ.
ರಾಜ್ಯದಾದ್ಯಂತ ಪ್ರತಿದಿನ ಸುಮಾರು 4 ಲಕ್ಷ ಗೃಹ ಬಳಕೆ ಎಲ್.ಪಿ.ಜಿ. ಸಿಲಿಂಡರ್‍ಗಳು ಹಾಗೂ ಸುಮಾರು 18,000 ವಾಣಿಜ್ಯ ಬಳಕೆ ಸಿಲಿಂಡರ್‍ಗಳನ್ನು ಪೂರೈಕೆ ಮಾಡಲಾಗುತ್ತಿದೆ. ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆಯಿಲ್ಲದೆ ಎಲ್.ಪಿ.ಜಿ. ಸರಬರಾಜು ಆಗುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ನಿರಂತರವಾಗಿ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.











0 comments:
Post a Comment