ಮಂಗಳೂರು, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ ಇವುಗಳ ಸಂಯುಕ್ತ ಸಹಭಾಗಿತ್ವದಲ್ಲಿ ಫೆ 20 ರಿಂದ 28ರವರೆಗೆ ಮಂಗಳೂರಿನ ಕರಾವಳಿ ಮೈದಾನದಲ್ಲಿ ನಡೆದ ರಾಷ್ಟ್ರ ಮಟ್ಟದ ಮಹಿಳಾ ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಬೃಹತ್ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ “ನಮ್ಮ ರಾಷ್ಟ್ರೀಯ ಸರಸ್ ಮೇಳ-2026” ಸಮಾಪನಗೊಂಡಿದೆ.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಜೀವಿನಿ -ಕೆ ಎಸ್ ಆರ್ ಎಲ್ ಟಿ ಎಸ್ ಅಪರ ಅಭಿಯಾನ ನಿರ್ದೇಶಕ ಶ್ರೀನಿವಾಸ್ ಎಂ ಅವರು ಫೆ 20 ರಂದು ಉದ್ಘಾಟನೆಗೊಂಡಿರುವ ರಾಷ್ಟ್ರ ಮಟ್ಟದ ಈ ಮೇಳದ ಅಂತ್ಯದ ವೇಳೆಗೆ 1,34,44,970/- ವಹಿವಾಟು ನಡೆದಿದೆ. ಇಲ್ಲಿ ಪ್ರಮುಖವಾಗಿ ರಾಷ್ಟ್ರದ 20 ರಾಜ್ಯಗಳ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸ್ವ-ಸಹಾಯ ಗುಂಪಿನ ಮಹಿಳೆಯರು ತಮ್ಮ ಜಿಲ್ಲೆಯ ಪ್ರಮುಖ ಉತ್ಪನ್ನಗಳೊಂದಿಗೆ ಭಾಗವಹಿಸಿದ್ದು, 120 ಮಳಿಗೆಗಳಲ್ಲಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರತ್ಯೇಕವಾಗಿ ಆಹಾರ ಮೇಳದ 30 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು ಕರಾವಳಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಮೇಳದಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರತ್ನಬಲ್ಲಿ ಸ್ವ ಸಹಾಯ ಸಂಘದ ಮಹಿಳೆಯರ ಹ್ಯಾಂಡ್ಲೂಮ್ ಮಳಿಗೆ ಅಂತ್ಯದ ವೇಳೆಗೆ 8,69,440/- ರೂಪಾಯಿಗಳ ವಹಿವಾಟಿನೊಂದಿಗೆ ಅತೀ ಹೆಚ್ಚು ವಾಪಾರ ವಹಿವಾಟು ನಡೆಸಿದ ಮಳಿಗೆಯಾಗಿದೆ. 5,11,290/- ರೂಪಾಯಿಗಳ ವಹಿವಾಟಿನೊಂದಿಗೆ ಪಶ್ವಿಮ ಬಂಗಾಳದ ರಾದಾ ಮಾಧವ ಎನ್ ಆರ್ ಎಲ್ ಎಂ ಸ್ವ-ಸಹಾಯ ಸಂಘ ದ್ವಿತೀಯ ಸ್ಥಾನ ಹಾಗೂ ಗುಜರಾತಿನ ಮಾರುತಿ ನಂದನ ಸ್ವಸಹಾಯ ಸಂಘ 4,42,520/- ರೂಪಾಯಿಗಳ ವಹಿವಾಟು ನಡೆಸಿ ತೃತೀಯ ಸ್ಥಾನದಲ್ಲಿದೆ ಎಂದರು.
ಮಂಗಳೂರಿನಲ್ಲಿ ಮೊದಲನೇ ಬಾರಿಗೆ ಆಯೋಜಿಸಲಾಗಿರುವ ಈ ಮೇಳದಲ್ಲಿ ಪ್ರಮುಖವಾಗಿ ನಗರ ಹಾಗೂ ಗ್ರಾಮೀಣ ಸ್ವ-ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳು ಮಾರಾಟ ಮಾಡಿರುವುದರಿಂದ ಹೆಚ್ಚು ಹೆಚ್ಚು ಸಾರ್ವಜನಿಕರು ಈ ಮೇಳದ ಸದುಪಯೋಗವನ್ನು ಪಡೆದುಕೊಂಡು ಸ್ವ-ಸಹಾಯ ಗುಂಪಿನ ಮಹಿಳೆಯರ ಉತ್ಪನ್ನಗಳನ್ನು ಖರೀದಿಸಿ, ಹೆಚ್ಚಿನ ವಹಿವಾಟಿನೊಂದಿಗೆ ಅವರ ಆರ್ಥಿಕ ಸಬಲತೆಗೆ ಬೆಂಬಲಿಸುವಲ್ಲಿ ನಾಡಿನ ಹಾಗೂ ಕರಾವಳಿಯ ಸಾರ್ವಜ£ಕರು ಕೈಜೋಡಿಸಿರುವುದು ಸಂತಸದ ವಿಚಾರ ಎಂದರು.
ಈ ಸಂದರ್ಭ ಜಿಲ್ಲಾ ಯೋಜನಾ ನಿರ್ದೇಶಕ ಜಯರಾಮ್, ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರುಗಳಾದ ಪ್ರಭಾಕರ ಆಚಾರ್ಯ, ಕಾರ್ತಿಕ್ ಬಿ, ರಾಜೇಶ್, ಕಿಶೋರ್ ಎಂ ಕೆ, ಯೋಜನಾ ನಿರ್ವಾಹಕರಾದ ಮದನ್ ಕೆ.ಎಂ, ಹರಿಪ್ರಸಾದ್ ಗೌಡ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ಭಾಗವಹಿಸಿದ್ದರು. ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕರಾದ ಆನಂದ್ ಹಾಗೂ ಜಯಾನಂದ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.

























0 comments:
Post a Comment