ಬಂಟ್ವಾಳ, ಮಾರ್ಚ್ 11, ಮಾರ್ಚ್, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಆಲಡ್ಕ ಕೆನರಾ ಬ್ಯಾಂಕ್ ಮುಂಭಾಗದ ಕುಡಿಯುವ £ೀರಿನ ಪೈಪ್ ಒಡೆದು ತಿಂಗಳು ಕಳೆದ ಬಳಿಕ ಪತ್ರಿಕಾ ವರದಿಯ ನಂತರ ತಕ್ಷಣ ಸ್ಪಂದಿಸದ ಪುರಸಭಾ ಮುಖ್ಯಾಧಿಕಾರಿ ಅವರು ಪೈಪ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರಾದರೂ ಇದೀಗ ಪೈಪ್ ದುರಸ್ತಿಯಾಗಿ 2 ವಾರಗಳಾದರೂ ಇನ್ನೂ ಪೈಪ್ ದುರಸ್ತಿಗಾಗಿ ತೋಡಿದ ಗುಂಡಿ ಇನ್ನೂ ಮುಚ್ಚದೆ ಅಪಾಯ ಆಹ್ವಾನಿಸಲಾಗುತ್ತಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆನರಾ ಬ್ಯಾಂಕ್ ಬಳಿಯ ಬಂಗ್ಲೆಗುಡ್ಡೆ ಸಂಪರ್ಕದ ರಸ್ತೆಯಲ್ಲಿ ಪುರಸಭಾ ಕುಡಿಯುವ ನೀರಿನ ಪೈಪ್ ಒಡೆದು ಪರಿಸದರಲ್ಲಿ ನಿರಂತರ ಕೃತಕ ನೆರೆ ಪರಿಸ್ಥಿತಿ ಉದ್ಭವಗೊಂಡಿತ್ತು. ಪರಿಣಾಮ ಈ ರಸ್ತೆ ಸಂಪರ್ಕಿಸುವ ಮೆಸ್ಕಾಂ ಶಾಖಾ ಕಚೇರಿ, ಹಿಂದುಳಿದ ವರ್ಗಗಳ ಇಲಾಖೆಯ ಬಾಲಕಿಯರ ಹಾಸ್ಟೆಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಅಂಗನವಾಡಿ, ಅನುದಾನಿತ ಪ್ರೌಢಶಾಲೆ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ದೈವಸ್ಥಾನಕ್ಕೆ ಬರುವವರು ದಾರಿ ಕಾಣದೆ ನಿತ್ಯವೂ ನೆರೆ ನೀರನ್ನು ದಾಟಿ ಬರಬೇಕಾದ ದುಸ್ಥಿತಿ ಇತ್ತು. ಈ ಬಗ್ಗೆ ಪತ್ರಿಕೆ ಫೆಬ್ರವರಿ 25 ರಂದು ಸಚಿತ್ರ ವರದಿ ಪ್ರಕಟಿಸಿದ ಮರುದಿನ ಅಂದರೆ ಫೆಬ್ರವರಿ 26 ರಂದು ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ಪೈಪ್ ದುರಸ್ತಿಗೆ ಕ್ರಮ ಕೈಗೊಂಡಿದ್ದರು.
ಆದರೆ ಈ ಪೈಪ್ ದುರಸ್ತಿಗಾಗಿ ಸ್ಥಳದಲ್ಲಿ ಗುಂಡಿ ತೋಡಲಾಗಿದ್ದು, ಅದನ್ನು 2 ವಾರ ಕಳೆದರೂ ಇನ್ನೂ ಮುಚ್ಚದೆ ಹಾಗೇ ಬಿಟ್ಟು ಬಿಡಲಾಗಿದೆ. ಇದರಿಂದ ಪರಿಸರದಲ್ಲಿ ಅಪಾಯದ ಕರೆಗಂಟೆ ಭಾರಿಸುತ್ತಿದೆ. ಪಾಣೆಮಂಗಳೂರು ಮುಖ್ಯ ರಸ್ತೆ ಇದಾಗಿದ್ದು, ನಿತ್ಯ ಹಲವು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿದೆ. ಅಲ್ಲದೆ ಬ್ಯಾಂಕ್, ಮೆಸ್ಕಾಂ ಶಾಖಾ ಕಚೇರಿ, ಶಾಲೆ, ಅಂಗನವಾಡಿ, ಹಾಸ್ಟೆಲುಗಳಿಗೆ ಬರುವವರೂ ಇದೇ ರಸ್ತೆಯನ್ನು ಬಳಸುತ್ತಿದ್ದು, ಅಪಾಯ ಆಹ್ವಾನಿಸುವಂತಿದೆ. ರಾತ್ರಿ ಹೊತ್ತಲ್ಲಂತೂ ಇಲ್ಲಿನ ಗುಂಡಿ ಗಮನಕ್ಕೆ ಬಾರದೆ ಗಂಭೀರ ಅಪಾಯಗಳು ಎದುರಾಗುವ ಸಾಧ್ಯತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ತಕ್ಷಣ ಸಂಬಂಧಪಟ್ಟವರು ಇಲ್ಲಿನ ಗುಂಡಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.














0 comments:
Post a Comment