ಸ್ವಾಭಿಮಾನದ ಬದುಕು ಶಿಕ್ಷಣದಿಂದ ಮಾತ್ರ ಸಾಧ್ಯ : ಸ್ಪೀಕರ್ ಯು.ಟಿ. ಖಾದರ್ - Karavali Times ಸ್ವಾಭಿಮಾನದ ಬದುಕು ಶಿಕ್ಷಣದಿಂದ ಮಾತ್ರ ಸಾಧ್ಯ : ಸ್ಪೀಕರ್ ಯು.ಟಿ. ಖಾದರ್ - Karavali Times

728x90

2 March 2026

ಸ್ವಾಭಿಮಾನದ ಬದುಕು ಶಿಕ್ಷಣದಿಂದ ಮಾತ್ರ ಸಾಧ್ಯ : ಸ್ಪೀಕರ್ ಯು.ಟಿ. ಖಾದರ್

ಪಿಲಿಕುಳದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 


ಮಂಗಳೂರು, ಮಾರ್ಚ್ 03, 2026 (ಕರಾವಳಿ ಟೈಮ್ಸ್) : ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಸಹಯೋಗದಲ್ಲಿ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಚರಿಸಲಾಯಿತು. 

ಕಾರ್ಯಕ್ರಮ ಉದ್ಘಾಟಿಸಿದ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಉಪಸಮಿತಿಯ ಅಧ್ಯಕ್ಷ ಪ್ರೊ ಜಿ. ಶ್ರೀನಿಕೇತನ್ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ನೀತಿಗಳು ಹಾಗೂ ನವೀನ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಗೆ ಪೂರಕವಾದ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ. ಮಕ್ಕಳು ಪ್ರಶ್ನಿಸುವ ಹಾಗೂ ಸಂಶೋಧನಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆ ಹಾಗೂ ಸಾಧನೆಗಳತ್ತ ಮುಂದಾಗಬೇಕು ಎಂದರು. 

ಡಯಟ್ ಹಿರಿಯ ಉಪನ್ಯಾಸಕ ಶ್ರೀನಿವಾಸ ಅಡಿಗ ಮಾತನಾಡಿ, ಕಲಿಕೆ ಬರೀ ತರಗತಿಗೆ ಸೀಮಿತವಾಗಬಾರದು. ಜ್ಞಾನ, ಸೃಜನಾಶೀಲತೆ, ಕ್ರಿಯಾತತ್ಪರತೆ, ಸಂಶೋಧನಾ ಭಾವನೆಗಳು ಒಟ್ಟು ಸೇರಿದಾಗ ಮಾತ್ರ ವಿದ್ಯಾರ್ಥಿಗಳ ಸಾಮಾಜಿಕ, ಭೌತಿಕ, ಶೈಕ್ಷಣಿಕ ಬೆಳವಣಿಗೆಗಳು ಆಗಲು ಸಾಧ್ಯ. ಹೊಸ ಹೊಸ ವಿಚಾರಗಳನ್ನು ತಿಳಿಯಬೇಕಾದರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ವಿಜ್ಞಾನ ಸಂವಹನಕಾರ ನಂದಿತಾ ಜಯರಾಜ್ ಮಾತನಾಡಿ,  ಭಾರತದ ಮಹಿಳಾ ವಿಜ್ಞಾನಿಗಳಾದ ಅಣ್ಣಾ ಮಣಿ ಮತ್ತು ಕಮಲಾ ಸೋನಿ ಮುಂತಾದವರ ಮಹತ್ವದ ಸಾಧನೆಗಳನ್ನು ಶ್ಲಾಘಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಡಾ. ಅಶೋಕ್ ಕೆ.ಆರ್. ಮಾತನಾಡಿ,  ಇಂದಿನ ಯುವಪೀಳಿಗೆ ಡಿಜಿಟಲ್ ವ್ಯಸನಕ್ಕೆ ಒಳಗಾಗುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಮೊಬೈಲ್ ಫೋನ್ ಗಳು ಜ್ಞಾನಾರ್ಜನೆಗೆ, ಸಂವಹನಕ್ಕೆ ಮತ್ತು ನವೀನತೆಯ ಅಭಿವೃದ್ಧಿಗೆ ವರವಾಗಿದ್ದರೂ, ಅವುಗಳ ಅತಿಯಾದ ಅವಲಂಬನೆ ಶಾಪವಾಗುತ್ತಿದೆ ಎಂದರು. 

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ವಿಧಾನಸಭಾ ಸ್ಪೀಕರ್ ಡಾ ಯು.ಟಿ. ಖಾದರ್ ಫರೀದ್ ಮಾತನಾಡಿ, ಸ್ವಾಭಿಮಾನದ ಬದುಕು ಶಿಕ್ಷಣದಿಂದ ಮಾತ್ರ ಸಾಧ್ಯ. ಒಳ್ಳೆಯ ಮಾನವೀಯ ಗುಣಗಳನ್ನು ಸಂಪಾದಿಸಿಕೊಂಡು ದೇಶ ಬಲಿಷ್ಠವಾಗಲು ವಿದ್ಯಾರ್ಥಿಗಳೆಲ್ಲರೂ ಕಂಕಣ ಬದ್ದರಾಗಬೇಕು. ನಾವು ವಿದ್ಯಾರ್ಥಿ ದೆಸೆಯಲ್ಲಿ ಮಾಡಿದಂತಹ ವಿಜ್ಞಾನ ಮಾದರಿಗಳು ಮಾರುಕಟ್ಟೆಗೆ ಬಂದು ಪ್ರಸಿದ್ಧಿಯನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು. 

ಇದೇ ವೇಳೆ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪ್ರಮಾಣಪತ್ರ ನೀಡಿ ಸಭಾಧ್ಯಕ್ಷರು ಗೌರವಿಸಿದರು.  ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ಚೀಫ್ ಮ್ಯಾನೇಜರ್ ಗಳಾದ ಮಂಜುನಾಥ್ ಹಾಗೂ ಶ್ರೀಕಾಂತ್ ಭಾಗವಹಿಸಿದ್ದರು. ವೈಜ್ಞಾನಿಕ ಅಧಿಕಾರಿ ವಿಘ್ನೇಶ್ ಸ್ವಾಗತಿಸಿ, ಶೈಕ್ಷಣಿಕ ಸಹಾಯಕಿ ರಶ್ಮಿ ಕೆ ಎಂ ವಂದಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ್ ಕಾರ್ಯಕ್ರಮ ನಿರೂಪಿಸಿದರು. 

ಶೆಲ್ ಪ್ರಾಯೋಜಕತ್ವದ ಎನ್ ಎಕ್ಸ್-ಫೆÇಲೀರರ್ಸ್ ಯೋಜನೆಯಡಿಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ವತಿಯಿಂದ ದ.ಕ ಮತ್ತು ಉಡುಪಿ ಜಲ್ಲೆಯ ವಿವಿಧ ಶಾಲೆಗಳ ಸುಮಾರು 28 ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಲಾಗಿತ್ತು. ಜೊತೆಗೆ ವಿಜ್ಞಾನ ಕೇಂದ್ರದ ವತಿಯಿಂದ ಡ್ರಾಯಿಂಗ್ ಮತ್ತು  ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

  • Blogger Comments
  • Facebook Comments

0 comments:

Post a Comment

Item Reviewed: ಸ್ವಾಭಿಮಾನದ ಬದುಕು ಶಿಕ್ಷಣದಿಂದ ಮಾತ್ರ ಸಾಧ್ಯ : ಸ್ಪೀಕರ್ ಯು.ಟಿ. ಖಾದರ್ Rating: 5 Reviewed By: karavali Times
Scroll to Top