ಮಂಗಳೂರು, ಮಾರ್ಚ್ 09, 2026 (ಕರಾವಳಿ ಟೈಮ್ಸ್) : ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಭಾಗವಾಗಿ ಮಂಗಳೂರು ನಗರದ ಸುಲ್ತಾನ್ ಬತ್ತೇರಿ ಅಮೃತಾನಂದಮಯಿ ಶಾಲಾ ಬಳಿಯಿಂದ ತಣ್ಣೀರು ಬಾವಿ ಸಂಪರ್ಕಕ್ಕೆ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿದೆ. ಕಾಮಗಾರಿ ವೇಗ ಅಂದುಕೊಂಡಂತೆ ಸಾಗಿದರೆ ಮುಂದಿನ ವರ್ಷದ ವೇಳೆಗೆ ಸೇತುವೆ ಜನರಿಗೆ ಅರ್ಪಣೆಯಾಗಲಿದ್ದು, ದ್ವೀಪ ಪ್ರದೇಶದ ಜನರ ಕನಸು ನನಸಾಗಲಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಈ ನೂತನ ಸೇತುವೆ ಸುಮಾರು 900 ಮೀಟರ್ ಉದ್ದವಿದ್ದು, ಎರಡೂ ಕಡೆಯ ಸುಮಾರು 400 ಮೀಟರ್ ಅಂತರದಲ್ಲಿ ಕಾಂಕ್ರಿಟ್ ಪಿಲ್ಲರ್‍ಗಳನ್ನು ಅಳವಡಿಸಲಾಗಿದ್ದು, ಮಧ್ಯದ 100 ಮೀಟರ್ ಅಂತರದಲ್ಲಿ ಬೋಟುಗಳ ಸಾಗಾಟದ ಅನುಕೂಲಕ್ಕಾಗಿ ಸ್ಟೀಲ್ ರಾಡ್‍ಗಳನ್ನು ಅಳವಡಿಸಿ ಅತ್ಯಂತ ಸುಸಜ್ಜಿತ ರೀತಿಯಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದೆ.
ಈ ಸೇತುವೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರಿಗೆ ಅರ್ಪಣೆಗೊಂಡರೆ ದ್ವೀಪ ಪರಿಸರಗಳಾದ ತಣ್ಣೀರುಬಾವಿ, ಬೆಂಗ್ರೆ ಮೊದಲಾದ ಪ್ರದೇಶಗಳ ಜನರ ಬಹುಕಾಲದ ಕನಸು ನನಸಾದಂತಾಗಲಿದೆ. ಬೋಟುಗಳ ಮೂಲಕ ನದಿ ದಾಟಿ ಪ್ರಯಾಣ ಮಾಡುತ್ತಿದ್ದ ಅಥವಾ ರಸ್ತೆ ಮೂಲಕ ಸುತ್ತು ಬಳಸಿ ಪ್ರಯಾಣಿಸುತ್ತಿದ್ದ ಈ ಪರಿಸರವಾಸಿಗಳು ಮುಂದಿನ ದಿನಗಳಲ್ಲಿ ನೇರವಾಗಿ ನೂತನ ಸೇತುವೆ ಮೇಲೆ ತಮ್ಮ ಸಂಚಾರ ಆರಂಭಿಸಬಹುದಾಗಿದೆ. ಈ ಹಿನ್ನಲೆಯಲ್ಲಿ ಇದೊಂದು ಅತ್ಯಂತ ಮಹತ್ವಪೂರ್ಣ ಹಾಗೂ ಜನೋಪಯೋಗಿ ಯೋಜನೆಯಾಗಿದ್ದು, ಇಲ್ಲಿನ ಜನ ಈ ಸೇತುವೆ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
















0 comments:
Post a Comment