ಬಂಟ್ವಾಳ, ಮಾರ್ಚ್ 05, 2026 (ಕರಾವಳಿ ಟೈಮ್ಸ್) : ಕಳೆದ ಕೆಲವು ದಿನಗಳಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀಟರ್ ನೀರು ಸಂಗ್ರಹಿಸುತ್ತಿದ್ದು ಮಂಗಳೂರಿನ ಜನತೆಗೆ ಇನ್ನು ಮೂವತ್ತೊಂಬತ್ತು ದಿನ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಾ 4 ರಂದು ಮಧ್ಯಾಹ್ನ ತುಂಬೆ ವೆಂಟೆಡ್ ಡ್ಯಾಂ ಬಳಿ ಗಂಗಾದೇವಿಗೆ ಪೂಜೆ ಸಲ್ಲಿಸಿ ಬಳಿಕ ಡ್ಯಾಂ ವೀಕ್ಷಿಸಿ ಬಾಗಿನ ನೀಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮೂಲಭತ ಸೌಕರ್ಯಗಳಲ್ಲಿ ನೀರು ಅತೀ ಮುಖ್ಯ. ಈ ವರ್ಷ ನಿರಂತರವಾಗಿ ಮಳೆ ಬಂದಿರುವುದರಿಂದ ನೇತ್ರಾವತಿಯಲ್ಲಿ ನದಿ ನೀರಿ£ಂದ ಸಂಪೂರ್ಣ ತುಂಬಿದ್ದು ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಗರಿಷ್ಠ 6 ಮಿಟರ್ ಎತ್ತರದಲ್ಲಿ ಸುಮಾರು 10.42 ಎಂಸಿಎಂ ನೀರು ಸಂಗ್ರಹವಾಗಿದೆ. ಅಂದಾಜು 39 ದಿನಗಳವರೆಗೆ ಪೂರೈಕೆ ಮಾಡಬಹುದು. ಕಿಂಡಿ ಅಣೆಕಟ್ಟಿನ ನೀರಿನ ಮಟ್ಟ ಕಡಿಮೆಯಾದಲ್ಲಿ ಹಿಂಭಾಗದಲ್ಲಿರುವ ಕಿಂಡಿ ಅಣೆಕಟ್ಟುಗಳಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ನೀರನ್ನು ಬಿಡಿಸಿಕೊಳ್ಳಲಾಗುವುದು ಎಂದರು.
ಈ ಸಂದರ್ಭ ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಬಿ ರಮಾನಾಥ ರೈ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮನಪಾ ಆಯುಕ್ತ ರವಿಚಂದ್ರ ನಾಯಕ್, ಇಂಜಿನಿಯರ್ ನರೇಶ್ ಶೆಣೈ, ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಜೊತೆಗಿದ್ದರು.





















0 comments:
Post a Comment