ಬಂಟ್ವಾಳ, ಮಾರ್ಚ್ 02, ಮಾರ್ಚ್, 2026 (ಕರಾವಳಿ ಟೈಮ್ಸ್) : ಅವಧಿ ಮೀರಿದ, ಅಂತರ ನಿಯಮ ಉಲ್ಲಂಘಿಸಿದ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಮಾರ್ಚ್ 3 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30ರವರೆಗೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪ ಸಾಮೂಹಿಕ ಧರಣಿ ನಡೆಯಲಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆದ್ದಾರಿ ಪ್ರಾಧಿಕಾರ ಟೋಲ್ ಸಂಗ್ರಹ ಆರಂಭಿಸಿ 23 ವರ್ಷಗಳು ಕಳೆದಿವೆ. ಬಿ ಸಿ ರೋಡು-ನಂತೂರು ರಸ್ತೆ ಅಭಿವೃದ್ದಿಗೆ ಹೂಡಿರುವ ಬಂಡವಾಳ ಸಂಗ್ರಹಿಸಿ ಕೆಲವೇ ವರ್ಷಗಳಲ್ಲಿ ಟೋಲ್ ಗೇಟ್ ಮುಚ್ಚುವ ಭರವಸೆಯೊಂದಿಗೆ ಆರಂಭಿಸಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚುವ ಯಾವುದೇ ಸೂಚನೆ ಕಂಡುಬರುತ್ತಿಲ್ಲ. ಹೂಡಿಕೆ ಮಾಡಿರುವ ಬಂಡವಾಳ, ಸಂಗ್ರಹ ಆಗಿರುವ ಮೊತ್ತದ ವಿವರಗಳೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಆರಂಭದ ವರ್ಷಗಳಲ್ಲಿ ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ಉಚಿತ ಓಡಾಟದ ಅವಕಾಶವೂ ಬಳಿಕದ ದಿನಗಳಲ್ಲಿ ರದ್ದಾಗಿದೆ. ಪ್ರಶ್ನಿಸಿದವರ ದಬ್ಬಾಳಿಕೆ ಉಡಾಫೆ ನಡೆಸಲಾಗುತ್ತಿದೆ. ಕಾನೂನು ಕ್ರಮ ಜರುಗಿಸಿ ಹೋರಾಟ ಬಂದ್ ಮಾಡುವ ಪ್ರಯತ್ನಗಳೂ ನಡೆಯುತ್ತಿದೆ.
ಬ್ರಹ್ಮರಕೂಟ್ಲು ಟೋಲ್ ಗೇಟ್ ನಿರ್ಮಾಣದ ದಶಕದ ಬಳಿಕ ಆರಂಭಗೊಂಡ ತಲಪಾಡಿ ಟೋಲ್ ಗೇಟ್ ಅಂತರ ಕೇವಲ 35 ಕಿ ಮೀ, ಹೆಜಮಾಡಿ ಟೋಲ್ ಗೇಟ್ ಅಂತರ 44 ಕಿ ಮೀ ಇದೆ. ಇದೀಗ ವಳಾಲು ಪಣಕಜೆ, ಗಂಜಿಮಠದಲ್ಲೂ ಮೂರು ಹೊಸ ಟೋಲ್ ಗೇಟ್ ಗಳು ನಿರ್ಮಾಣ ಹಂತದಲ್ಲಿದೆ. ಈ ಮೂರು ಟೋಲ್ ಗೇಟ್ ಗಳ ನಡುವೆ ಇರುವ ಅಂತರ ಸರಾಸರಿ 30 ಕಿ ಮೀ ಆಗಿದೆ. ಇದೆಲ್ಲವೂ ಟೋಲ್ ಗೇಟ್ ಗಳ ನಡುವಿನ ಅಂತರ 60 ಕಿಮೀ ಇರಬೇಕೆಂಬ ನಿಯಮದ ಉಲ್ಲಂಘನೆಯಾಗಿದೆ.
ಈ ಎಲ್ಲಾ ಸಕಾರಣಗಳನ್ನು ಮುಂದಿಟ್ಟುಕೊಂಡು ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಈ ಸಾಮೂಹಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ, ಹೋರಾಟಗಾರರಾದ ಮುನೀರ್ ಕಾಟಿಪಳ್ಳ, ಮೋಹನ್ ಶೆಟ್ಟಿ ಹಾಗೂ ಶೇಖರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















0 comments:
Post a Comment