ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಬೊಲೆರೋ ವಾಹನ ಡಿಕ್ಕಿಯಾಗಿ ಬೈಸಿಕಲ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಬಿ ಸಿ ರೋಡು ಸಮೀಪದ ಕುರ್ಸುಗುಡ್ಡೆ ಕ್ರಾಸ್ ಎಂಬಲ್ಲಿ ಎಪ್ರಿಲ್ 1 ರಂದು ಬೆಳಿಗ್ಗೆ ಸಂಭವಿಸಿದೆ.
ಮೃತ ಬೈಸಿಕಲ್ ಸವಾರರನ್ನು ಇಲ್ಲಿಗೆ ಸಮೀಪದ ಶಾಂತಿಅಂಗಡಿ ನಿವಾಸಿ ಗೋಡ್ವಿನ್ ಪಿಂಟೋ (45) ಎಂದು ಹೆಸರಿಸಲಾಗಿದೆ. ಇವರು ಕುರ್ಸುಗುಡ್ಡೆ ಕ್ರಾಸ್ ಕಡೆಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸೈಕಲ್ಲಿನಲ್ಲಿ ಬಿ ಸಿ ರೋಡು ಕಡೆಗೆ ತೆರಳಲು ಹೆದ್ದಾರಿಯ ಏಕಮುಖ ರಸ್ತೆಗೆ ಪ್ರವೇಶ ಪಡೆದು ಸಂಚರಿಸುತ್ತಿದ್ದ ವೇಳೆ ಮಂಗಳೂರಿನಿಂದ ಬಿ ಸಿ ರೋಡು ಕಡೆಗೆ ಬರುತ್ತಿದ್ದ ವಿನೋದ್ ಎ ಎಂಬವರು ಚಲಾಯಿಸಿಕೊಂಡು ಬಂದ ಕೆಎ19 ಎಂಡಿ8186 ನೋಂದಣಿ ಸಂಖ್ಯೆಯ ಬೊಲೆರೋ ವಾಹನ ಸೈಕಲ್ಲಿಗೆ ಡಿಕ್ಕಿ ಹೊಡೆದು ಬಳಿಕ ಬಲಭಾಗದಿಂದ ಬಿ ಸಿ ರೋಡು ಕಡೆಗೆ ಹೋಗುತ್ತಿದ್ದ ಲಾರಿಗೆ ಎದುರಿಗೆ ಅಡ್ಡವಾಗಿ ಬಂದು ಡಿಕ್ಕಿಯಾಗಿ ಹೆದ್ದಾರಿ ಡಿವೈಡರಿಗೆ ತಾಗಿ ನಿಂತಿದೆ.
ಅಪಘಾತದಿಂದ ತಲೆಗೆ ಗಂಭೀರ ಗಾಯಗೊಂಡ ಗೋಡ್ವಿನ್ ಅವರನ್ನು ತಕ್ಷಣ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರು ತನ್ನ ಮಗನ ಹೊಸ ಸೈಕಲ್ಲಿಗೆ ಗಾಳಿ ತುಂಬಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಪಲ್ಲಮಜಲು ನಿವಾಸಿ ಕೆ ಕುಮಾರ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment