ಬಂಟ್ವಾಳ, ಎಪ್ರಿಲ್ 27, 2026 (ಕರಾವಳಿ ಟೈಮ್ಸ್) : ಮಂಗಳೂರು-ಧರ್ಮಸ್ಥಳ ನಡುವೆ ಸಂಚರಿಸುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪರ್ಸಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರಿಮಾರು ಗ್ರಾಮದ ಕಾಗೆಕಾನ-ಬಲ್ಯಮನೆ ನಿವಾಸಿ ಕ್ರಿಸ್ತಿನ್ ವೇಗಸ್ (63) ಎಂಬವರಿಗೆ ಸೇರಿದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾಗಿದೆ. ಇವರು ತನ್ನ ಪತಿ ಗೇಬ್ರಿಯಲ್ ಲಸ್ರಾದೋ ಅವರ ಜೊತೆ ಎಪ್ರಿಲ್ 24 ರಂದು ಸಂಜೆ 4 ಗಂಟೆಗೆ ಉಜಿರೆಯಲ್ಲಿನ ಸಂಬಂಧಿಕರ ಮನೆಯಲ್ಲಿ ನಡೆಯುವ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದರು. ಮನೆಯಿಂದ ಹೊರಡುವಾಗ ಇವರು ಚಿನ್ನಾಭರಣ, 3,500/- ರೂಪಾಯಿ ನಗದು ಹಣ, ಎಟಿಎಂ ಕಾರ್ಡ್ ಹಾಗೂ ವೋಟರ್ ಐಡಿ ಕಾರ್ಡನ್ನು ಚಿಕ್ಕ ಪರ್ಸಿನಲ್ಲಿಟ್ಟು ಅದನ್ನು ಕಪ್ಪು ಬಣ್ಣದ ದೊಡ್ಡ ಪರ್ಸಿನಲ್ಲಿಟ್ಟು ಹೊರಟಿದ್ದರು.
ಉಜಿರೆಯ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮರುದಿನ ಅಂದರೆ ಎಪ್ರಿಲ್ 25 ರಂದು ಸಂಜೆ 5 ಗಂಟೆಗೆ ತಂಗಿ ಮನೆಯಿಂದ ಮನೆಗೆ ಬರುವರೇ ಬೆಳ್ತಂಗಡಿಯಿಂದ ಧರ್ಮಸ್ಥಳ-ಮಂಗಳೂರು ನಡುವೆ ಸಂಚರಿಸುವ ಕೆ ಎ 19 ಎಫ್ 3080 ನೋಂದಣಿ ಸಂಖ್ಯೆಯ ಕೆ ಸ್ ಆರ್ ಟಿ ಸಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಟಿಕೆಟ್ ಪಡೆಯುವ ಹೊತ್ತಿಗೆ ಪರ್ಸ್ ಇತ್ತು. ಬಳಿಕ ಇವರು ಬಿ ಸಿ ರೋಡಿನಲ್ಲಿ ಸಂಜೆ 5.50ಕ್ಕೆ ಇಳಿದು ಪರ್ಸ್ ನೋಡಿದಾಗ ಬ್ಯಾಗಿನಲ್ಲಿಟ್ಟಿದ್ದ ಚಿಕ್ಕ ಪರ್ಸ್ ಕಳವಾಗಿರುವುದು ಬೆಳಕಿಗೆ ಬಂದಿದೆ.
ಚಿಕ್ಕ ಪರ್ಸಿನಲ್ಲಿದ್ದ ಒಟ್ಟು ಸುಮಾರು 6.24 ಲಕ್ಷ ರೂಪಾಯಿ ಮೌಲ್ಯದ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರ ಮತ್ತು 4 ಗ್ರಾಂ ತೂಕದ ಚಿನ್ನದ ಉಂಗುರ ಕಳವಾಗಿದೆ. ಈ ಬಗ್ಗೆ ಕ್ರಿಸ್ತಿನ್ ವೇಗಸ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment