ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬ್ಯಾರಿ ಕಲೆ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ಕೇಂದ್ರೀಕರಿಸಿಕೊಂಡು ಸಮ್ಮೇಳನ ರೀತಿಯ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸುವಂತೆ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮ್ಮರ್ ಯು ಎಚ್ ಅವರಿಗೆ ಮನವಿ ಮಾಡಿದ್ದಾರೆ.
ಎಪ್ರಿಲ್ 6 ರಂದು ಅಕಾಡೆಮಿ ಕಚೇರಿಯಲ್ಲಿ ಅಧ್ಯಕ್ಷರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು ಈ ಬಗ್ಗೆ ಸಿದ್ದತೆ ನಡೆಸಿ ಶೀಘ್ರದಲ್ಲೇ ಬಂಟ್ವಾಳದಲ್ಲಿ ಬ್ಯಾರಿ ಸಾಂಸ್ಕೃತಿಕ ಕಲರವ ಆಯೋಜಿಸುವಂತೆ ಮನವಿ ಮಾಡಿದರಲ್ಲದೆ ಅದಕ್ಕೆ ಬಂಟ್ವಾಳದ ಸರ್ವ ಸಾಹಿತ್ಯಾಸಕ್ತರನ್ನು ಒಗ್ಗೂಡಿಸಿ ಬೆಂಬಲ ನೀಡುವುದಾಗಿ ತಿಳಿಸಿದರು.
ಅಬ್ಬಾಸ್ ಅಲಿ ಅವರ ಮನವಿಗೆ ಪೂರಕವಾಗಿ ಪ್ರತಿಕ್ರಯಿಸಿದ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಅವರು ತಕ್ಷಣ ಈ ಬಗ್ಗೆ ಕಾರ್ಯಯೋಜನೆ ರೂಪಿಸಿ ಮುಂದಿನ ತಿಂಗಳ ಆರಂಭದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲ ಸಿದ್ದತೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಬಂಟ್ವಾಳ ಬ್ಯಾರಿ ಸಾಹಿತ್ಯಾಸಕ್ತರ ಒಕ್ಕೂಟದ ಪ್ರಮುಖರಾದ ಪಿ ಎಂ ಅಶ್ರಫ್ ಪಾಣೆಮಂಗಳೂರು, ಯು ಮುಸ್ತಫಾ ಆಲಡ್ಕ ಮೊದಲಾದವರು ಜೊತೆಗಿದ್ದರು.



















0 comments:
Post a Comment